ನವದೆಹಲಿ, ಫೆ.22 (DaijiworldNews/PY): ಪಾಕಿಸ್ತಾನಕ್ಕೆ ಮಾಹಿತಿ ನೀಡುತ್ತಿದ್ದ ಆರೋಪದಲ್ಲಿ ಭಾರತೀಯ ನೌಕಾಪಡೆಯ 13 ಮಂದಿ ಸಿಬ್ಬಂದಿಗಳನ್ನು ಬಂಧಿಸಲಾಗಿದೆ. ಇದರೊಂದಿಗೆ ನೌಕಾಪಡೆಯ ಹನಿಟ್ರ್ಯಾಪ್ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಈವರೆಗೆ ಯಾವುದೇ ಪತ್ರಿಕೆಗಳು ಹಾಗೂ ಟಿವಿ ಚಾನೆಲ್ಗಳು ಬಂಧಿತರ ಹೆಸರನ್ನು ಪ್ರಕಟಿಸಿಲ್ಲ. ಆದರೆ, ಸುಪ್ರೀಂಕೋರ್ಟ್ನ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಬಂಧಿತರನ್ನು ದೀಪಕ್ ತ್ರಿವೇದಿ, ಸತೀಶ್ ಮಿಶ್ರ, ರಿಂಕು ತ್ಯಾಗಿ, ಸಂಜೀವ್ ಕುಮಾರ್, ರಿಷಿ ಮಿಶ್ರ,ವೇದ್ ರಾಮ್, ಸಂಜಯ್ ತ್ರಿಪಾಠಿ, ಬಬ್ಲೂ ಸಿಂಗ್, ದೇವ್ ಶರಣ್ ಗುಪ್ತ, ವಿಕಾಸ್ ಕುಮಾರ್, ಪಂಕಜ್ ಐಯ್ಯರ್, ರಾಹುಲ್ ಸಿಂಗ್, ಸಂಜಯ್ ರಾವತ್ ಎಂದು ಟ್ವೀಟ್ ಮಾಡಿದ್ದಾರೆ.
ಬಂಧಿತ ಸಿಬ್ಬಂದಿಗಳು ಸಾಮಾಜಿಕ ಜಾಲತಾಣದ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ನೀಡುತ್ತಿದ್ದುದು ಖಚಿತವಾಗಿದೆ ಎಂಬುದಾಗಿ ಅಧಿಕೃತ ಮೂಲಗಳು ತಿಳಿಸಿವೆ. ಇವರನ್ನು ವಿಶಾಖಪಟ್ಟಣಂ, ಹಾಗೂ ಕರ್ನಾಟಕದ ಕಾರವಾರ ನೌಕಾಪಡೆಯಿಂದ ಬಂಧಿಸಲಾಗಿದೆ.
ಮಾಹಿತಿ ಸೋರಿಕೆ ಸಂಬಂಧ ಈಗಾಗಲೇ 13 ಮಂದಿಯನ್ನು ಬಂಧಿಸಲಾಗಿದ್ದು ತನಿಖೆ ನಡೆಸುತ್ತಿದ್ದಾರೆ. ಪಾಕಿಸ್ತಾನಿ ಗುಪ್ತಚರರೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧ ಹೊಂದಿರುವ ಸಿಬ್ಬಂದಿ ವಿರುದ್ದವೂ ತನಿಖೆ ಮುಂದುವರೆದಿದೆ ಎಂದು ನೌಕಾಪಡೆ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ನೌಕಾಪಡೆ ಸ್ಮಾರ್ಟ್ಫೋನ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಸಂಪೂರ್ಣವಾಗಿ ನಿಷೇಧಿಸಿದ ನಂತರವೂ ಕಳಪೆ ನೆಟ್ವರ್ಕ್ನ ಆರೋಪ ಕೇಳಿಬಂದಿದೆ. ನೌಕಾಪಡೆಯಲ್ಲಿ ಸ್ಮಾರ್ಟ್ಫೋನ್ ಬದಲು ಹಳೆಯ 2ಜಿ ಸಂಪರ್ಕ ಹೊಂದಿದ ಮೊಬೈಲ್ ಉಪಯೋಗಿಸಲು ಮಾತ್ರ ಅವಕಾಶವಿದೆ.
ಪ್ರಕರಣದ ವಿಚಾರವಾಗಿ ಆಂಧ್ರ ಪೊಲೀಸರು ಹಾಗೂ ನೌಕಾಪಡೆ ಗುಪ್ತಚರ ವಿಭಾಗದ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದ ಆರೋಪದ ಹಿನ್ನೆಲೆ ನೌಕಾಪಡೆಯ 7 ಮಂದಿ ಸಿಬ್ಬಂದಿಗಳನ್ನು ಡಿಸೆಂಬರ್ನಲ್ಲಿ ಬಂಧಿಸಲಾಗಿತ್ತು.