ದಾವಣಗೆರೆ, ಫೆ.22 (DaijiworldNews/PY): "ವಿದ್ಯಾರ್ಥಿಗಳನ್ನು ಬಳಕೆ ಮಾಡಿಕೊಂಡು ಸಮಾಜದಲ್ಲಿ ಅಶಾಂತಿ ಉಂಟುಮಾಡುವ, ಧರ್ಮಗಳ ನಡುವೆ ದ್ವೇಷ ಬೆಳೆಸುವ ಕಾರ್ಯ ನಡೆಯುತ್ತಿದೆ. ಅಂತಹ ಶಕ್ತಿಗಳನ್ನು ಮೊಟಕುಗೊಳಿಸಬೇಕಿದೆ" ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು, "ರಾಜ್ಯ ಹಾಗೂ ದೇಶದಲ್ಲಿ ಹೊಸ ಬೆಳವಣಿಗೆ ನಡೆಯುತ್ತಿದೆ. ಭಾನುವಾರ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದೇನೆ. ಕೆಲವು ಸಂಘಟನೆಗಳು ಇಂತಹ ಕುಮ್ಮಕ್ಕು ನೀಡುತ್ತಿದ್ದು, ಅಂತಹ ಸಂಘಟನೆಗಳನ್ನು, ವ್ಯಕ್ತಿಗಳನ್ನು ಬೇರು ಸಮೇತ ಕಿತ್ತು ಹಾಕಬೇಕಿದೆ" ಎಂದು ತಿಳಿಸಿದರು.
ಕಲಬುರ್ಗಿಯಲ್ಲಿ ಮಹಾರಾಷ್ಟ್ರದ ಮಾಜಿ ಶಾಸಕ ಪಠಾಣ್ ವಿವಾದಾತ್ಮಕ ಹೇಳಿಕೆಯ ಪ್ರಕರಣದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಈ ವಿಚಾರವಾಗಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ. ಘಟನೆ ನಡೆದಂದು ಪೊಲೀಸ್ ಕಮಿಷನರ್ ಅವರು ರಜೆ ಇದ್ದ ಕಾರಣ ತಡವಾಗಿದ್ದು, ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ" ಎಂದರು.
ಶಾಸಕ ಭವನಕ್ಕೆ ಮಾಧ್ಯಮಗಳ ಪ್ರವೇಶ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು, "ಅದು ಸ್ಪೀಕರ್ ವ್ಯಾಪ್ತಿಗೆ ಒಳಪಟ್ಟಿದೆ. ಈ ವಿಚಾರವಾಗಿ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ" ಎಂದು ಹೇಳಿದರು.