ನವದೆಹಲಿ, ಫೆ.22 (DaijiworldNews/PY): "ನಮ್ಮ ನ್ಯಾಯಾಂಗದ ಅಡಿಪಾಯಗಳಾಗಿ ಪರಿಗಣಿಸಿರುವ ಸತ್ಯ ಹಾಗೂ ಸೇವೆಗಾಗಿ ಗೌರವಾನ್ವಿತ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಅಂತರರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನದಲ್ಲಿ ಮಾತನಾಡಿದ ಅವರು, "ನಮ್ಮ ನ್ಯಾಯಾಂಗದ ಅಡಿಪಾಯಗಳಾಗಿ ಪರಿಗಣಿಸಿರುವ ಸತ್ಯ ಹಾಗೂ ಸೇವೆಗಾಗಿ ಗೌರವಾನ್ವಿತ ಮಹಾತ್ಮ ಗಾಂಧೀಜಿಯವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು. ಅವರೊಬ್ಬ ನ್ಯಾಯವಾದಿಯಾಗಿದ್ದರು. ತಮ್ಮ ವೃತ್ತಿಯಲ್ಲಿ ಅವರು ಹೋರಾಡಿದ ಮೊದಲ ಪ್ರಕರಣದ ಬಗ್ಗೆ ತಮ್ಮ ಆತ್ಮಚರಿತ್ರೆಯಲ್ಲಿ ಬಹಳ ವಿವರವಾಗಿ ಬರೆದಿದ್ದಾರೆ" ಎಂದು ತಿಳಿಸಿದರು.
"ಗಾಂಧಿಯವರು ತಾವು ಪಾಲಿಸುತ್ತಿದ್ದ ಸಂಸ್ಕೃತಿ ಹಾಗೂ ಭಾರತೀಯ ತತ್ತ್ವಶಾಸ್ತ್ರದಿಂದ ಬಂದ ಸತ್ಯವನ್ನು ಎತ್ತಿಹಿಡಿಯುವ ವಿಚಾರವಾಗಿ ಸ್ಪಷ್ಟವಾಗಿದ್ದರು. ಗಾಂಧೀಜಿಯವರು ಕೈಗೆತ್ತಿಕೊಳ್ಳುವ ಪ್ರಕರಣಗಳಿಗಾಗಿ ಶುಲ್ಕ ಪಾವತಿಸಲು ಮುಂದಾಗುತ್ತಿದ್ದರೂ ಕೂಡ ಅವರು ಅದನ್ನು ನಿರಾಕರಿಸುತ್ತಿದ್ದರು. ನಮ್ಮ ದೇಶವು ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆಯ ಸಮಯದಲ್ಲಿ ಈ ಸಮ್ಮೇಳನ ನಡೆಯುತ್ತಿರುವುದರಿಂದ ಇದು ಭಾರತಕ್ಕೆ ಒಂದು ಅತ್ಯುನ್ನತ ಕ್ಷಣವಾಗಿದೆ" ಎಂದರು.
"ಇತ್ತೀಚೆಗಷ್ಟೇ ಜಾಗತಿಕವಾಗಿ ಚರ್ಚೆಗೆ ಒಳಗಾಗಿದ್ದ ಕೆಲ ಪ್ರಮುಖ ನ್ಯಾಯಾಂಗ ತೀರ್ಪುಗಳು ಹೊರಬಂದಿದ್ದು, ಈ ತೀರ್ಪುಗಳು ಬರುವುದಕ್ಕೂ ಮೊದಲು ಇವು ಹೊತ್ತು ತರುವ ಹಲವು ಪರಿಣಾಮಗಳ ವಿಚಾರವಾಗಿ ಆತಂಕ ಎದುರಾಗಿತ್ತು. ಆದರೆ 1.3 ಶತಕೋಟಿ ಭಾರತೀಯರು ತೆರೆದ ಹೃದಯದಿಂದ ತೀರ್ಪುಗಳನ್ನು ಒಪ್ಪಿಕೊಂಡರು" ಎಂದು ತಿಳಿಸಿದರು.