ನವದೆಹಲಿ, ಫೆ.22 (DaijiworldNews/PY): ಫೆ.25ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಅವರು ದಕ್ಷಿಣ ದೆಹಲಿಯ ಸರ್ಕಾರಿ ಶಾಲೆಗೆ ಭೇಟಿ ನೀಡುತ್ತಿದ್ದು, ಶಾಲೆಯ ಸಂತೋಷ ಪಠ್ಯಕ್ರಮ (ಹ್ಯಾಪಿನೆಸ್ ಕರಿಕ್ಯುಲಮ್) ತರಗತಿಯನ್ನು ವೀಕ್ಷಿಸಲಿದ್ದಾರೆ. ಆದರೆ, ಈ ಕಾರ್ಯಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರಿಗೆ ಆಹ್ವಾನ ನೀಡಿಲ್ಲ ಎಂದು ವರದಿಯಾಗಿದೆ.
ಇದೇ 24ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪತ್ನಿ ಮೆಲಾನಿಯಾ ಟ್ರಂಪ್ ಎರಡು ದಿನಗಳ ಭೇಟಿಗಾಗಿ ಭಾರತಕ್ಕೆ ಆಗಮಿಸುತ್ತಿದ್ದು, ಟ್ರಂಪ್ ದಂಪತಿ ಈ ಎರಡು ದಿನಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಫೆ.25ರ ಮಂಗಳವಾರ ಮೆಲಾನಿಯಾ ಟ್ರಂಪ್ ಅವರು ದಕ್ಷಿಣ ದೆಹಲಿ ಸರ್ಕಾರ ಶಾಲೆಯೊಂದಕ್ಕೆ ಭೇಟಿ ನೀಡಿ, ಸಂತೋಷ ಪಠ್ಯಕ್ರಮ (ಹ್ಯಾಪಿನೆಸ್ ಕರಿಕ್ಯುಲಮ್) ತರಗತಿಯನ್ನು ವೀಕ್ಷಿಸಲಿದ್ದಾರೆ.
ಈ ಮೊದಲು ಆಪ್ ಸರ್ಕಾರ ದೆಹಲಿಯ ಸರ್ಕಾರಿ ಶಾಲೆಗಳಲ್ಲಿ ಪರಿಚಯಿಸಿರುವ ಸಂತೋಷ ಪಠ್ಯಕ್ರಮದ ಬಗ್ಗೆ ವಿವರಿಸಲು ಮುಖ್ಯಮಂತ್ರಿ ಕೇಜ್ರಿವಾಲ್ ಹಾಗೂ ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರೇ ಮೆಲಾನಿಯಾ ಟ್ರಂಪ್ ಅವರನ್ನು ಶಾಲೆಗೆ ಬರಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈಗ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯನ್ನೇ ಈ ಮಹತ್ವದ ಕಾರ್ಯಕ್ರಮದಿಂದ ದೂರವಿಟ್ಟಿರುವುದು ಚರ್ಚೆಗೆ ಕಾರಣವಾಗಿದೆ.
ಕೇಂದ್ರ ಸರ್ಕಾರವೇ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅವರಿಗೆ ಆಹ್ವಾನ ಸಿಗದಿರಲು ಕಾರಣ .ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರವೇ ಹೀಗೆ ಮಾಡಿದೆ ಎಂದು ಆಪ್ ದೂರಿದೆ.
ಆಪ್ ಆರೋಪಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ಇಂಥ ಮಹತ್ವದ ಬೆಳವಣಿಗೆಯಲ್ಲಿ ಕ್ಷುಲ್ಲಕ ರಾಜಕಾರಣ ಮಾಡಬಾರದು. ಇಂಥವರನ್ನೇ ಕರೆಯರಿ, ಕರೆಯದಿರಿ ಎಂದು ಕೇಂದ್ರ ಸರ್ಕಾರ ಅಮೆರಿಕ ಸರ್ಕಾರಕ್ಕೇನೂ ಹೇಳಿಲ್ಲ. ನಾನು ನಾನು, ನೀನು ನೀನು ಎಂದು ಇದರಲ್ಲಿ ಕಿತ್ತಾಡಲು ಆಗದು, ಎಂದು ಹೇಳಿದ್ದಾರೆ.
ಇನ್ನು ಈ ವಿಚಾರದ ಬಗ್ಗೆ ಅಮೆರಿಕ ರಾಯಭಾರ ಕಚೇರಿಯನ್ನು ಪ್ರಶ್ನಿಸಲಾಯಿತ್ತಾದರೂ, ಈ ವಿಚಾರ ದೆಹಲಿ ಸರ್ಕಾರಕ್ಕೆ ಸಂಬಂಧಿಸಿದ್ದು ಎಂದು ಅದು ತಿಳಿಸಿದೆ. ಆದರೆ, ಆಹ್ವಾನ ದೊರಕದೇ ಇರುವುದರ ಬಗ್ಗೆ ದೆಹಲಿ ಸರ್ಕಾರದಿಂದ ಇನ್ನೂ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.