ನವದೆಹಲಿ, ಫೆ.22 (DaijiworldNews/PY): ಉತ್ತಮ ವೈದ್ಯಕೀಯ ಚಿಕಿತ್ಸೆಗೆ ಅನುಮತಿ ನೀಡಬೇಕೆಂದು ಕೋರಿ ನಿರ್ಭಯಾ ಪ್ರಕರಣ ಆರೋಪಿ ವಿನಯ್ ಶರ್ಮಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಪಟಿಯಾಲಾ ಹೌಸ್ ಕೋರ್ಟ್ ಶನಿವಾರ ವಜಾಗೊಳಿಸಿದೆ.
ತಾನು ಮಾನಸಿಕ ಅಸ್ವಸ್ಥ, ತಲೆ ಹಾಗೂ ತೋಳಿಗೆ ಗಾಯವಾಗಿದೆ ಇದಕ್ಕೆ ಸರಿಯಾದ ಚಿಕಿತ್ಸೆ ಪಡೆಯಲು ಅನುಮತಿ ನೀಡಬೇಕೆಂದು ಕೋರಿ ಅಪರಾಧಿ ವಿನಯ್ ಶರ್ಮಾ ಪರ ವಕೀಲರು ಅರ್ಜಿ ಸಲ್ಲಿಸಿದ್ದರು.
ಆದರೆ, ದೆಹಲಿ ಪಟಿಯಾಲಾ ಹೌಸ್ ಕೋರ್ಟ್ ವಿನಯ್ ಶರ್ಮಾನ ಅರ್ಜಿಯನ್ನು ವಜಾಗೊಳಿಸಿದ್ದು, ಅಪರಾಧಿ ವಿನಯ್ ಶರ್ಮಾ ಮಾನಸಿಕವಾಗಿ ಸದೃಢನಾಗಿದ್ದಾನೆ. ಆತನಿಗೆ ಯಾವುದೇ ಆರೋಗ್ಯದ ಸಮಸ್ಯೆಯಿಲ್ಲ ಎಂಬುದಾಗಿ ತಿಹಾರ್ ಜೈಲು ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ನಾಲ್ವರು ಅಪರಾಧಿಗಳಿಗೆ ಸೂಕ್ತವಾದ ವೈದ್ಯಕೀಯ ನೆರವು ಕೊಡಬೇಕೆಂದು ಜೈಲು ಅಧಿಕಾರಿಗಳಿಗೆ ಸೂಚಿಸಿದೆ.
ಜೈಲು ಅಧಿಕಾರಿಗಳು ಸಲ್ಲಿಸಿರುವ ವರದಿಯ ಆಧಾರದ ಮೇಲೆ ಅಪರಾಧಿ ವಿನಯ್ ಶರ್ಮಾನ ಮಾನಸಿಕ ಸ್ಥಿತಿ ಉತ್ತಮವಾಗಿದೆ. ಹಾಗಾಗಿ ಮರಣದಂಡನೆ ಶಿಕ್ಷೆಗೆ ಒಳಪಟ್ಟಿರುವ ಅಪರಾಧಿಗಳಿಗೆ ವೈದ್ಯಕೀಯ ಚಿಕಿತ್ಸೆಯ ಅವಶ್ಯಕತೆಯಿಲ್ಲ ಎಂದು ಕೋರ್ಟ್ ತಿಳಿಸಿದೆ.