ಶ್ರೀನಗರ್, ಫೆ.22 (DaijiworldNews/PY): ಬಾರಾಮುಲ್ಲಾ ಜಿಲ್ಲೆಯ ಟಪ್ಪಾರ್ ಪಟ್ಟಾನ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ ಜಮ್ಮು-ಕಾಶ್ಮೀರದ ಭದ್ರತಾ ಪಡೆಗಳು ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ನಾಯಕನನ್ನು ಶನಿವಾರ ಬಂಧಿಸಿದ್ಧಾರೆ.
ಮುಜಾಹಿದೀನ್ ಉಗ್ರಗಾಮಿ ಸಂಘಟನೆಯ ನಾಯಕನನ್ನು ಜುನೈದ್ ಫಾರೂಖ್ ಪಂಡಿತ್ ಎಂದು ಗುರುತಿಸಲಾಗಿದೆ ಎಂದು ವರದಿ ತಿಳಿಸಿದೆ.
ಗುಪ್ತಚರ ಇಲಾಖೆ ನೀಡಿದ ಖಚಿತ ಮಾಹಿತಿ ಆಧಾರದ ಮೇಲೆ ಬಾರಾಮುಲ್ಲಾ ಜಿಲ್ಲೆಯ ಟಪ್ಪಾರ್ ಪಟ್ಟಾನ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯಲಾಯಿತು. ಹಿಜ್ಬುಲ್ ಉಗ್ರ ಜುನೈದ್ ಹಲವಾರು ಭಯೋತ್ಪಾದಕ ಸಂಬಂಧಿತ ಘಟನೆಗಳಲ್ಲಿ ಬೇಕಾದ ವ್ಯಕ್ತಿಯಾಗಿದ್ದ ಎಂದು ವರದಿ ತಿಳಿಸಿದೆ.
ಜಮ್ಮು ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್ ಪಿಎಫ್ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರನನ್ನು ಬಂಧಿಸಲಾಗಿದೆ. ಬಾರಾಮುಲ್ಲಾ ಡಿಐಜಿ ಎಂ.ಸುಲೇಮಾನ್ ಈ ವಿಚಾರವಾಗಿ ಮಾಹಿತಿ ನೀಡಿದ್ದು, ಹಿಜ್ಬುಲ್ ಮುಜಾಹಿದೀನ್ ಸಂಘಟನೆಯ ಸ್ಥಳೀಯ ಉಗ್ರ ಜುನೈದ್ ಫಾರೂಖ್ನನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಬಂಧಿತ ಉಗ್ರನಿಂದ ಒಂದು ಪಿಸ್ತೂಲ್, 13 ಜೀವಂತ ಗುಂಡುಗಳು, 2 ಮ್ಯಾಜಜೀನ್ಸ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಜುನೈದ್ ವಿಚಾರಣೆ ನಡೆಯುತ್ತಿದೆ ಎಂದು ಡಿಐಜಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.