ನವದೆಹಲಿ, ಫೆ.22 (DaijiworldNews/PY): "ಲಕ್ಷಾಂತರ ಜನರು, ನಾಗರಿಕರ ಹೊರತಾದ ಯುದ್ಧೋನ್ಮಾದದ ಹಾಗೂ ಸಂಪೂರ್ಣ ಭಾವನಾತ್ಮಕ ಕಲ್ಪನೆಯ ಭಾರತ ಕಟ್ಟುವ ಸಲುವಾಗಿ ರಾಷ್ಟ್ರವಾದ ಹಾಗೂ ಭಾರತ್ ಮಾತಾ ಕೀ ಜೈ ಎಂಬ ಘೋಷಣೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಈ ಸಮಯದಲ್ಲಿ ಹೂ ಈಸ್ ಭಾರತ್ ಮಾತಾ ಪುಸ್ತಕ ಅತ್ಯಂತ ಪ್ರಸ್ತುತ ಎನಿಸಿದೆ" ಎಂದು ಮಾಜಿ ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಹೇಳಿದ್ದಾರೆ.
ಶನಿವಾರ ಜವಾಹರಲಾಲ್ ನೆಹರು ಅವರ ಕುರಿತ ಹೂ ಈಸ್ ಭಾರತ್ ಮಾತಾ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಜಗತ್ತಿನ ಪ್ರಮುಖ ಶಕ್ತಿಯಾಗಿ ಕಾಣುತ್ತಿರುವುದರ ಹಿಂದೆ ದೇಶದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರ ಪರಿಶ್ರಮವಿದೆ. ಅವರು ನವ ಭಾರತದ ಶಿಲ್ಪಿ" ಎಂದು ಹೇಳಿದರು.
"ಇನ್ನಷ್ಟೇ ದೇಶ ನಿರ್ಮಾಣವಾಗಬೇಕಿದ್ದ ಕಾಲಘಟ್ಟದಲ್ಲಿ ನೆಹರು ವಿಭಿನ್ನ ಸಾಮಾಜಿಕ ಹಾಗೂ ರಾಜಕೀಯ ದೃಷ್ಟಿಕೋನಗಳೊಂದಿಗೆ ಈ ದೇಶವನ್ನು ಮುನ್ನಡೆಸಿದ್ದಾರೆ. ನವ ಭಾರತದ ನಿರ್ಮಾಣಕ್ಕಾಗಿ ನೆಹರು ಹಲವು ವಿಶ್ವವಿದ್ಯಾಲಯಗಳಿಗೆ, ಅಕಾಡೆಮಿಗಳಿಗೆ, ಸಾಂಸ್ಕೃತಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು. ಆದರೆ, ಅವರು ನಿರೀಕ್ಷಿಸಿದಂತ ದೇಶವಾಗಿ ಇಂದು ಭಾರತವಿಲ್ಲ" ಎಂದು ತಿಳಿಸಿದರು.
"ಇವತ್ತಿನ ಸಮಾಜದ ಕೆಲ ವರ್ಗದ ಜನ ಭಾರತದ ಇತಿಹಾಸದ ಬಗ್ಗೆ ತಿಳಿದುಕೊಳ್ಳದೇ, ಪೂರ್ವಾಗ್ರಹಪೀಡಿತರಾಗಿ, ನೆಹರು ಅವರನ್ನು ಕೆಟ್ಟದಾಗಿ ಬಿಂಬಿಸುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ, ನನಗೆ ವಿಶ್ವಾಸವಿದೆ. ಇತಿಹಾಸಕ್ಕೆ ಸುಳ್ಳುಗಳನ್ನು ನಿರಾಕರಿಸಿ ಎಲ್ಲವನ್ನೂ ಸರಿಯಾದ ರೀತಿಯಲ್ಲಿ ಬಿಂಬಿಸುವ ಶಕ್ತಿ ಇದೆ" ಎಂದರು.
ಲೇಖಕರಾದ ಪುರುಷೋತ್ತಮ್ ಅಗರ್ವಾಲ್ ಹಾಗೂ ರಾಧಾ ಕೃಷ್ಣ ಅವರು ರಚಿಸಿರುವ ಹೂ ಈಸ್ ಭಾರತ್ ಮಾತಾ ಪುಸ್ತಕದಲ್ಲಿ ನೆಹರು ಅವರ ಆತ್ಮಚರಿತ್ರೆ, ಜಗತ್ತಿನ ಸಂಕ್ಷಿಪ್ತ ಇತಿಹಾಸ, ಭಾರತದ ಅನ್ವೇಷಣೆ ಕುರಿತ ಅಂಶಗಳಿವೆ. ನೆಹರು ಅವರ ಭಾಷಣಗಳು, ಲೇಖನ, ಸ್ವಾತಂತ್ರ ಪೂರ್ವ-ನಂತರದಲ್ಲಿ ನೆಹರು ಬರೆದ ಪತ್ರಗಳು, ಸಂದರ್ಶನಗಳಿವೆ. ಈ ಪುಸ್ತಕವನ್ನು ಮೊದಲು ಇಂಗ್ಲೀಷ್ನಲ್ಲಿ ತರಲಾಗಿದ್ದು, ಈಗ ಕನ್ನಡದಲ್ಲೂ ಬಿಡುಗಡೆ ಮಾಡಲಾಗಿದೆ.