ನವದೆಹಲಿ, ಫೆ 23 (Daijiworld News/MB) : ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸಲು 100 ಕೋಟಿ ರೂಪಾಯಿ ವ್ಯಯ ಮಾಡುತ್ತಿರುವ ಸಚಿವಾಲಯ ಯಾವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದ್ದಾರೆ.
ಅಹ್ಮದಾಬಾದ್ನ ಮೊಟೆರಾ ಕ್ರೀಡಾಂಗಣದಲ್ಲಿ ಬೃಹತ್ ಕಾರ್ಯಕ್ರಮ ‘ನಮಸ್ತೇ ಟ್ರಂಪ್’ ಆಯೋಜಿಸುತ್ತಿರುವ ಸಮಿತಿಯ ಪಾತ್ರದ ಬಗ್ಗೆ, "ಡೊನಾಲ್ಡ್ ಟ್ರಂಪ್ ಭೇಟಿ ಕಾರ್ಯಕ್ರಮಕ್ಕಾಗಿ 100 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಸಮಿತಿಯ ಮೂಲಕವಾಗಿ ಹಣವನ್ನು ವೆಚ್ಚ ಮಾಡಲಾಗುತ್ತಿದೆ. ಆದರೆ ಸದಸ್ಯರಿಗೆಯೇ ತಾವು ಸಮಿತಿಯ ಸದಸ್ಯರು ಎಂದು ತಿಳಿದಿಲ್ಲ" ಎಂದು ವ್ಯಂಗ್ಯ ಮಾಡಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾರತ ಭೇಟಿಯ ಕುರಿತು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಅವರು ದೇಶಕ್ಕೆ ಈ ಸಮಿತಿಗೆ ಯಾವ ಸಚಿವಾಲಯ ಹಣ ಒದಗಿಸಿದೆ ಎಂದು ತಿಳಿದುಕೊಳ್ಳಲು ಹಕ್ಕಿಲ್ಲವೇ? ಸರ್ಕಾರ ಸಮಿತಿಯ ಸೋಗಿನಿಂದ ಏನನ್ನು ಮರೆಮಾಚುತ್ತಿದೆ? ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.
ಹಾಗೆಯೇ ಟ್ವೀಟ್ನೊಂದಿಗೆ ಹಿಂದಿ ಸುದ್ದಿಯ ತುಣುಕನ್ನು ಕೂಡಾ ಅಪ್ಲೋಡ್ ಮಾಡಿದ್ದಾರೆ.
ಡೋನಾಲ್ಡ್ ಟ್ರಂಪ್ ನಾಗರಿಕ ಅಭಿನಂದನಾ ಸಮಿತಿಯು ನಮಸ್ತೇ ಟ್ರಂಪ್ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಿದೆ. ಫೆ. 24 ರಂದು ಡೋನಾಲ್ಡ್ ಟ್ರಂಪ್ ತಮ್ಮ ಕುಟುಂಬದೊಂದಿಗೆ ಭಾರತಕ್ಕೆ 2 ದಿನಗಳ ಭೇಟಿಗಾಗಿ ಬರಲಿದ್ದಾರೆ.