ಚಿಕ್ಕಮಗಳೂರು, ಫೆ 23 (Daijiworld News/MB) : ತನ್ನ ಪತ್ನಿಯನ್ನು ಅಮಾನುಷವಾಗಿ ಕತ್ತು ಸೀಳಿ ಹತ್ಯೆಗೈದು, ಪತ್ನಿಯನ್ನು ದರೋಡೆಕೋರರು ಚಿನ್ನಾಭರಣಗಳು ದೋಚಿ ಹತ್ಯೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದ ವೈದ್ಯನ ರಹಸ್ಯ ಬಯಲಾಗಿದ್ದು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಫೆ.17 ರಂದು ಕಡೂರು ಪಟ್ಟಣದ ಲಕ್ಷ್ಮೀಪುರದಲ್ಲಿ ದಂತ ವೈದ್ಯ ಡಾ.ರೇವಂತ್ ಅವರ ಪತ್ನಿಯ ಹತ್ಯೆಯಾಗಿತ್ತು. ಬೀರೂರಿನ ತನ್ನ ಕ್ಲಿನಿಕ್ನಿಂದ ಮನೆಗೆ ವಾಪಾಸ್ ಆದ ರೇವಂತ್ ತನ್ನ ಪತ್ನಿಯ ಹತ್ಯೆಯಾಗಿದೆ ಎಂದು ಪೊಲೀಸರಿಗೆ ತಿಳಿಸಿದ್ದನು. ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದರು.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು ತನಿಖೆ ನಡೆಸಿ ಆರೋಪಿಯ ಕುರಿತು ಸತ್ಯಾಸತ್ಯತೆ ಬಯಲಿಗೆಳೆದಿದ್ದಾರೆ.
ಪೊಲೀಸರು ಹತ್ಯೆ ನಡೆದ ದಿನದಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೇಲ್ನೋಟಕ್ಕೆ ದರೋಡೆಗೈದು ಹತ್ಯೆ ಮಾಡಲಾಗಿರುವಂತೆ ಕಾಣುತ್ತದೆ ಎಂದು ತಿಳಿಸಿದ್ದರು.
ಆದರೆ ಕವಿತಾ ಹತ್ಯೆ ಮಾಡಲಾಗಿರುವ ಸ್ಥಳ, ಸಿಕ್ಕ ಸಾಕ್ಷಿಗಳು ಹಾಗೂ ಸಿಸಿ ಟಿವಿ ಕ್ಯಾಮೆರಾ ದೃಶ್ಯಾವಳಿಯಿಂದ ಪೊಲೀಸರಿಗೆ ಇದು ಪರಿಚಿತರ ಕೃತ್ಯ ಎಂಬ ಶಂಕೆ ಉಂಟಾಗಿದ್ದು ಈ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ನಡೆಸಲು ಆರಂಭಿಸಿದ್ದರು.
ಆದರೆ ಈ ಹತ್ಯೆ ನಡೆದ ಐದನೇ ದಿನಕ್ಕೆ ಮೃತ ಕವಿತಾಳ ಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದಾಗಿ ಪೊಲೀಸರಿಗೆ ಮತ್ತಷ್ಟು ಅನುಮಾನಗಳು ಉಂಟಾಗಿದ್ದು ರೇವಂತ್ ಆತ್ಮಹತ್ಯೆ ಮಾಡಿಕೊಂಡ ಕೆಲವೇ ಸಮಯಗಳ ಬಳಿಕ ಹತ್ಯೆಯ ಹಿಂದಿನ ರಹಸ್ಯ ಬಯಲಾಗಿದೆ.
ಕಳೆದ 7 ವರ್ಷದ ಹಿಂದೆ ಉಡುಪಿ ಮೂಲದ ಎಂಎ ಪದವೀಧರೆಯಾಗಿದ್ದ ಕವಿತಾಳನ್ನು ರೇವಂತ್ ವಿವಾಹವಾಗಿದ್ದ. ವಿವಾಹದ ಬಳಿಕ ಕಡೂರಿನ ಲಕ್ಷ್ಮೀಪುರದಲ್ಲಿರುವ ತನ್ನ ಮನೆಯಲ್ಲಿ ವಾಸವಾಗಿದ್ದ. ಡಾ. ರೇವಂತ್ ಹಾಗೂ ಕವಿತಾ ದಂಪತಿಗಳಿಗೆ 5 ವರ್ಷ ಹಾಗೂ 7 ತಿಂಗಳಿನ ಇಬ್ಬರು ಮಕ್ಕಳಿದ್ದಾರೆ.
ರೇವಂತ್ನ ತಾಯಿ ಕೂಡಾ ಜೊತೆಯಲ್ಲೇ ವಾಸವಾಗಿದ್ದು ಹತ್ಯೆ ನಡೆದ ದಿನ ಹತ್ಯೆ ನಡೆದ ದಿನ ಬ್ಯಾಂಕಿಗೆ ಹೋಗಿದ್ದ ತಾಯಿಯನ್ನು ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕ್ಲಿನಿಕ್ಗೆ ಕರೆಸಿದ್ದ. ಹಾಗೆಯೇ ದೊಡ್ಡ ಮಗುವನ್ನು ಶಾಲೆಯಿಂದ ತಾನೇ ಕರೆತಂದು ಕ್ಲಿನಿಕ್ನಲ್ಲಿ ಕೂರಿಸಿದ್ದ. ಅಷ್ಟು ಮಾತ್ರವಲ್ಲದೆ ಸಂಜೆ ಆರು ಗಂಟೆ ಸುಮಾರಿಗೆ ಪತ್ನಿಗೆ ಕರೆ ಮಾಡುವ ನಾಟಕವನ್ನು ಮಾಡಿದ್ದಾನೆ.
ಹತ್ಯೆ ನಡೆದ ಮಧ್ಯಾಹ್ನ ಊಟವಾದ ಬಳಿಕ ರೇವಂತ್ ತನ್ನ ಪತ್ನಿಗೆ ಅಮಲು ಬರುವ ಇಂಜೆಕ್ಷನ್ ನೀಡಿ ತನ್ನ 7 ತಿಂಗಳ ಮಗುವಿನ ಎದುರಲ್ಲೇ ಕತ್ತು ಸೀಳಿ ಅಮಾನುಷವಾಗಿ ಹತ್ಯೆ ಮಾಡಿದ್ದಾನೆ. ಆ ಬಳಿಕ ಕಪಾಟಿನಲ್ಲಿದ್ದ ಚಿನ್ನಾಭರಣಗಳನ್ನು ತೆಗೆದುಕೊಂಡು ಮನೆಯ ಬಾಗಿಲು ಹಾಕಿ ಬೀರೂರಿನ ಕ್ಲಿನಿಕ್ಗೆ ತೆರಳಿದ್ದ.
ಹತ್ಯೆ ನಡೆದಂದು ಎಂದಿಗಿಂತ ಅರ್ಧ ಗಂಟೆ ತಡವಾಗಿ ತಾಯಿ ಮಗುವಿನೊಂದಿಗೆ ಮನೆಗೆ ಹೋಗಿದ್ದಾನೆ. ತಾಯಿ ಕವಿತಾ ಎಲ್ಲಿ ಎಂದು ಕೇಳಿದಾಗ ಒಳಗೆ ಇರಬಹುದು ಎಂದು ಹೇಳಿದ್ದಾನೆ. ತಾಯಿ ಹಾಗೂ ಮಗು ಕವಿತಾ ಹತ್ಯೆಯಾಗಿರುವುದನ್ನು ನೋಡಿದಾಗಲೇ ರೇವಂತ್ ಪೊಲೀಸರಿಗೆ ಕರೆ ಮಾಡಿ ಹತ್ಯೆಯಾಗಿರುವ ಕುರಿತು ತಿಳಿಸಿದ್ದಾನೆ.
ತನಿಖೆ ನಡೆಸಿದ ಪೊಲೀಸರಿಗೆ ಅನುಮಾನ ಮೂಡುತ್ತಿದ್ದಂತೆ ಪೊಲೀಸರು ರೇವಂತ್ನನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದರು. ಆ ಸಂದರ್ಭದಲ್ಲಿ ತನ್ನ ಮೇಲೆ ಯಾವುದೇ ಅನುಮಾನ ಬಾರದಂತೆ ವರ್ತಿಸಿದ್ದ ರೇವಂತ್ ಹತ್ಯೆ ಮಾಡಿದವನು ತಾನೇ ಎಂದು ಪೊಲೀಸರಿಗೆ ತಿಳಿಯುತ್ತಿದ್ದಂತೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ್ದಾನೆ.
ತನ್ನ ಅನೈತಿಕ ಸಂಬಂಧಕ್ಕೆ ಅಡಿಯಾಗಿದ್ದ ಕಾರಣಕ್ಕೆ ಪತ್ನಿಯನ್ನು ಹತ್ಯೆಗೈದಿದ್ದಾನೆ ಎಂದು ತಿಳಿದು ಬಂದಿದೆ.