ತಮಿಳುನಾಡು, ಫೆ 23 (Daijiworld News/MB) : ಕೃಷ್ಣಗಿರಿ ಜಿಲ್ಲೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಲವು ದಶಕಗಳಕಾಲ ಆತಂಕಕ್ಕೆ ಕಾರಣವಾಗಿದ್ದ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಹಾಗೆಯೇ ಈ ಸಂದರ್ಭದಲ್ಲಿ ಪಾಟ್ರಾಳಿ ಮಕ್ಕಳ್ ಕಚ್ಚಿಯ 1000ಕ್ಕೂ ಹೆಚ್ಚು ಕಾರ್ಯಕರ್ತರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಮುರಳಿಧರ ರಾವ್ ನೇತೃತ್ವದಲ್ಲಿ ಬಿಜೆಪಿಗೆ ಸೇರಿದ್ದಾರೆ.
ಈ ಕುರಿತಾಗಿ ಮಾಧ್ಯಮದೊಂದಿಗೆ ಮಾತನಾಡಿದ ವಕೀಲೆ, ಸಾಮಾಜಿಕ ಹೋರಾಟಗಾರ್ತಿ, ವೀರಪ್ಪನ್ ಪುತ್ರಿ ವಿದ್ಯಾ ರಾಣಿ, "ನಾನು ಮೋದಿಯವರ ಕಾರ್ಯ ವೈಖರಿಗೆ ಮನಸೋತಿದ್ದೇನೆ. ಅವರ ಸ್ಫೂರ್ತಿಯಿಂದಲೇ ನಾನು ಬಿಜೆಪಿ ಸೇರಿದ್ದೇನೆ" ಎಂದು ಹೇಳಿದ್ದಾರೆ.
"ಎರಡು ವರ್ಗಳ ಹಿಂದೆ ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರನ್ನು ಭೇಟಿಯಾಗಿದ್ದೆ. ಆ ಸಂದರ್ಭದಲ್ಲಿ ಅವರು ನನಗೆ ಬಿಜೆಪಿಗೆ ಸೇರ್ಪಡೆಯಾಗುವಂತೆ ತಿಳಿಸಿದ್ದರು. ಆ ಹಿನ್ನಲೆಯಲ್ಲಿ ನಾನು ಈ ತೀರ್ಮಾನವನ್ನು ಕೈಗೊಂಡಿದ್ದೇನೆ" ಎಂದೂ ಕೂಡಾ ತಿಳಿಸಿದ್ದಾರೆ.
"ಜಾತಿ ಧರ್ಮಗಳನ್ನೂ ಮೀರಿ ಜನರಿಗೆ ಶಿಕ್ಷಣ ನೀಡುವ ಮೂಲಕ ಅವರನ್ನು ಮೇಲೆತ್ತಬೇಕು. ಸಮಾಜದ ಎಲ್ಲ ಸ್ತರದ ವಿದ್ಯಾರ್ಥಿಗಳಿಗೂ ಕೃಷ್ಣಗಿರಿಯಲ್ಲಿ ಟುಟೋರಿಯಲ್ ನಡೆಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ.
ರಾಜ್ಯ ಬಿಜೆಪಿ ಕಾರ್ಯದರ್ಶಿ ಕೆ.ಎಸ್ ನರೇಂದ್ರನ್ ಅವರು, "ವಿದ್ಯಾರಾಣಿ ಅವರ ಸೇವೆಯನ್ನು ನಾವು ಸಮರ್ಪಕವಾಗಿ ಬಳಸಿಕೊಳ್ಳಲಿದ್ದೇವೆ. ಪಕ್ಷದಲ್ಲಿ ಆಕೆಯ ಸ್ಥಾನಮಾನವನ್ನು ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುತ್ತದೆ" ಎಂದಿದ್ದಾರೆ.