ನವದೆಹಲಿ, ಫೆ 23 (Daijiworld News/MB) : ಮೂವತ್ತು ಬಾರಿ ಬಸ್ಕಿ ಹೊಡೆದರೆ ರೈಲ್ವೆ ಪ್ಲಾಟ್ಫಾರ್ಮ್ ಟಿಕೆಟ್ ಉಚಿತ ನೀಡುವ ಆಫರ್ ಒಂದನ್ನು ಭಾರತೀಯ ರೈಲ್ವೆ ಇಲಾಖೆ ಸಾರ್ವಜನಿಕರಿಗೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಕಾರ್ಯಕ್ರಮದ ಭಾಗವಾಗಿ, ಮೊದಲ ಫಿಟ್ ಇಂಡಿಯಾ ಸ್ಕ್ವಾಟ್ ಯಂತ್ರವನ್ನು ದೆಹಲಿಯ ಆನಂದ್ ವಿಹಾರ್ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದು ಈಗಾಗಲೇ ಓರ್ವ ವ್ಯಕ್ತಿ 180 ಸೆಕೆಂಡ್ನಲ್ಲಿ 30 ಬಾರಿ ಬಸ್ಕಿ ಹೊಡೆದು ಉಚಿತ ಪ್ಲಾಟ್ಫಾರ್ಮ್ ಟಿಕೆಟ್ ಪಡೆದಿದ್ದಾರೆ.
ಗುರುವಾರ ಈ ನಿಲ್ದಾಣದಲ್ಲಿ ಯಂತ್ರ ಅಳವಡಿಸಲಾಗಿದ್ದು ಈವರೆಗೆ 200 ಮಂದಿ ಪ್ರಯತ್ನ ನಡೆಸಿದ್ದಾರೆ. ಇನ್ನು ಕೆಲವರು 180 ಸೆಕೆಂಡ್ನಲ್ಲಿ 30 ಬಾರಿ ಬಸ್ಕಿ ಹೊಡೆದ ವ್ಯಕ್ತಿಯನ್ನು ದಾಖಲೆಯನ್ನು ಹಿಂದಿಕ್ಕುವ ಪ್ರಯತ್ನ ಮಾಡಿದ್ದಾರೆ ಎಂದು ಭಾರತೀಯ ರೈಲು ನಿಲ್ದಾಣ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಸ್.ಕೆ. ಲೋಹಿಯಾ ಅವರು ಹೇಳಿದ್ದಾರೆ.
ಇದು ಸ್ವಯಂ ಚಾಲಿತ ಯಂತ್ರವಾಗಿದ್ದು ಯಾವುದೇ ಬಟನ್ ಒತ್ತಬೇಕಾಗಿಲ್ಲ. ಯಂತ್ರದ ಮುಂದೆ ಬಸ್ಕಿ ತೆಗೆದಂತೆ ಯಂತ್ರವೇ ಎಣಿಕೆ ಮಾಡುತ್ತದೆ. ಹಾಗೆಯೇ ಬಸ್ಕಿಯನ್ನು ಸರಿಯಾಗಿ ತೆಗೆದಿದ್ದೇವೆಯೋ ಇಲ್ಲವೋ ಎಂಬುದನ್ನು ಈ ಯಂತ್ರವೇ ಪರಿಗಣನೆಗೆ ತೆಗೆದುಕೊಳ್ಳುತ್ತದೆ. ಬಳಿಕ ಯಂತ್ರವೇ ಟಿಕೆಟ್ ನೀಡುತ್ತದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
ದೇಶದಾದ್ಯಂತ ಆಯ್ದ ರೈಲು ನಿಲ್ದಾಣಗಳಲ್ಲಿ ಇಂಥಹ ಯಂತ್ರಗಳನ್ನು ಅಳವಡಿಕೆ ಮಾಡಲಾಗುವುದು. ಇದರಿಂದಾಗಿ ಫಿಟ್ ಇಂಡಿಯಾ ಚಳವಳಿಯ ಉದ್ದೇಶ ಈಡೇರಿದಂತೆ ಆಗುತ್ತದೆ. ಹಾಗೆಯೇ ನಿಲ್ದಾಣದಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಹೆಚ್ಚುತ್ತದೆ ಎಂದು ಹೇಳಿದ್ದಾರೆ.
ವಿದೇಶದಲ್ಲಿ ರೈಲು ಮತ್ತು ವಿಮಾನ ನಿಲ್ದಾಣಗಳಲ್ಲಿ ಇದು ಸಾಮಾನ್ಯವಾಗಿದ್ದು ಭಾರತದಲ್ಲಿ ಇದು ಮೊದಲ ಪ್ರಯೋಗ ಎಂದು ತಿಳಿಸಿದ್ದಾರೆ.