ಬೆಂಗಳೂರು, ಫೆ 23 (Daijiworld News/MB) : 16 ವರ್ಷದ ಬಾಲಕನ ವಿವಾಹ 19 ವರ್ಷದ ಯುವತಿ ಜೊತೆ ಮಾಡಿರುವ ಘಟನೆ ಪುಟ್ಟೇನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಈಗ ಬಾಲಕನನ್ನು ರಕ್ಷಿಸಿ ಬಾಲಮಂದಿರದಲ್ಲಿ ಆಶ್ರಯ ನೀಡಲಾಗಿದೆ.
"ಈ ವಿವಾಹವನ್ನು ಬಾಲಕನ ತಂದೆ ತಾಯಿಯೇ ಮಾಡಿಸಿದ್ದಾರೆ. ಈ ಕುರಿತು ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಮನೆಗೆ ತೆರಳಿ ವಿಚಾರಣೆ ಮಾಡಿದ್ದು ಬಾಲ್ಯ ವಿವಾಹ ನಡೆಸಿರುವುದು ಸಾಭೀತಾಗಿದೆ. ಬಾಲಕನನ್ನು ಈಗ ರಕ್ಷಣೆ ಮಾಡಲಾಗಿದೆ" ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಾಲ್ಯ ವಿವಾಹ ಸಂಬಂಧ ಇಲಾಖೆಯ ಮೇಲ್ವಿಚಾರಕಿ ಸ್ವರ್ಣಲತಾ ದೂರು ನೀಡಿದ್ದಾರೆ. ಯುವತಿ ಹಾಗೂ ಬಾಲಕನ ಪೋಷಕರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಬಾಲಕನ ಪೋಷಕರು ಅಸ್ಸಾಂನವರಾಗಿದ್ದು 15 ವರ್ಷಗಳ ಹಿಂದೆ ನಗರಕ್ಕೆ ಬಂದು ಪುಟ್ಟೇನಹಳ್ಳಿಯಲ್ಲಿ ವಾಸವಿದ್ದಾರೆ. ಪೋಷಕರಿಲ್ಲದೆ ಯುವತಿ ಒಂಟಿಯಾಗಿ ಜೀವನ ಮಾಡುತ್ತಿದ್ದಳು. ಆಕೆಯ ಪರಿಚಯ ಮಾಡಿಕೊಂಡಿದ್ದ ಬಾಲಕನ ಪೋಷಕರು, ಮಗ ಅಪ್ತಾಪ್ತನೆಂಬುದು ತಿಳಿದಿದ್ದರೂ ಆತನ ಜೊತೆ ಮದುವೆ ಮಾಡಿಸಿದ್ದಾರೆ. ಪೋಷಕರನ್ನು ವಶಕ್ಕೆ ಪಡೆಯಲಾಗಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ.