ಚಿಕ್ಕಮಗಳೂರು, ಫೆ.23 (DaijiworldNews/PY) : "ಎಫ್ಕೆಸಿಸಿಐ ಸಂವಾದದಲ್ಲಿ ಹತ್ತಾರು ಬಗೆಯ ಪ್ರವಾಸೋದ್ಯಮ ಪ್ರೋತ್ಸಾಹಕ್ಕೆ ಅವಕಾಶವಿದೆ ಎಂದು ಹೇಳಿದ್ದೆ. ಈ ಹತ್ತಾರು ಅಂಶಗಳಲ್ಲಿ ಕ್ಯಾಸಿನೊ ಕೂಡಾ ಒಂದಾಗಿದೆ ಎಂದು ಹೇಳಿದ್ದೆ. ಆದರೆ, ಕ್ಯಾಸಿನೊ ಸೆಂಟರ್ ತೆರೆಯುತ್ತೇವೆ ಎಂದಿಲ್ಲ" ಎಂದು ಪ್ರವಾಸೋದ್ಯಮ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಂವಾದದಲ್ಲಿ ಗೋವಾ ಬಗ್ಗೆ ಪ್ರಸ್ತಾಪ ಬಂದಾಗ, ಪ್ರವಾಸೋದ್ಯಮವನ್ನು ಶ್ರೀಲಂಕಾ, ಹಾಂಕಾಂಗ್, ಸಿಂಗಪುರ, ಥಾಯ್ಲೆಂಡ್, ಲಾಸ್ವೆಗಾಸ್ಗಳು ಕ್ಯಾಸಿನೊದಿಂದ ಆಕರ್ಷಿಸಿವೆ. ಗೋವಾ ಪಬ್ ಹಾಗೂ ಕ್ಲಬ್ ಪ್ರಸಿದ್ಧಿಯಾಗಿದೆ. ಶ್ರೀಲಂಕಾಕ್ಕೆ ಭಾರತದ, ಕರ್ನಾಟಕದ ಎಷ್ಟು ಮಂದಿ ಹೋಗುತ್ತಾರೆ, ಗೋವಾಕ್ಕೆ ಕರ್ನಾಟಕದ ಎಷ್ಟು ಮಂದಿ ಹೋಗುತ್ತಾರೆ ಎಂಬುದನ್ನು ಪಟ್ಟಿ ಮಾಡಿದರೆ ನನ್ನ ಮಾತಿನಲ್ಲಿ ಎಷ್ಟು ಸತ್ಯ ಇದೆ ಎಂದು ತಿಳಿಯುತ್ತದೆ" ಎಂದು ಹೇಳಿದ್ದರು.
"ಲಾಸ್ವೆಗಾಸ್ಗೆ ಹೋಗುವುದೇ ಜೂಜಾಡಲು, ಮನರಂಜನೆಗಾಗಿ ಎಂಬುದು ವಾಸ್ತವ ಸತ್ಯ. ಇದರಿಂದ ಅಲ್ಲಿನ ಪ್ರವಾಸೋದ್ಯಮಕ್ಕೆ ಅನುಕೂಲವಾಗಿದೆ. ಶ್ರೀಲಂಕಾ ಪ್ರವಾಸಿಗರ ತಾಣವಾಗಲೂ ಇದೇ ಕಾರಣ. ಎಫ್ಕೆಸಿಸಿಐ ಸಂವಾದದ ಪೂರ್ಣ ವಿಡಿಯೋ ನೋಡಿದರೆ ನಿಜಾಂಶ ತಿಳಿಯುತ್ತದೆ. ಲಾಸ್ವೆಗಾಸ್ ನಗರದಲ್ಲಿ ವಿಮಾನ ದಟ್ಟಣೆ ಅಧಿಕವಿದೆ" ಎಂದು ತಿಳಿಸಿದರು.
"ದೇಶದ್ರೋಹದ ಚಟುವಟಿಕೆಗೆ ಕ್ಷಮೆ, ಸಹಾನುಭೂತಿ ಇರಬಾರದು. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವುದು, ಅಸ್ಸಾಂ ತುಂಡರಿಸಬೇಕು ಎನ್ನುವುದು ದೇಶಭಕ್ತಿಯೇ. ಇದು ತುಕ್ಡೆ ಗ್ಯಾಂಗುಗಳು ಮಾಡುವ ಕೆಲಸ. ಸಿಎಎ ವಿರೋಧ ಚಳವಳಿಯ ಹಿಂದೆ ದೇಶ ಒಡೆಯುವ ಸಂಚು ಇದೆ. ಇದು ದುರುದ್ದೇಶದ ಹೋರಾಟ, ಅದರ ವಿರುದ್ಧ ಜನರು ಬೀದಿಗಿಳಿಯಬೇಕು.. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಉಂಟುಮಾಡುವುದು ಅವರ ಉದ್ದೇಶ" ಎಂದು ಹೇಳಿದರು.