ಚಿತ್ರದುರ್ಗ, ಫೆ.23 (DaijiworldNews/PY) : "ಪಾಕಿಸ್ತಾನದ ಪರ ಅಥವಾ ಭಾರತ ವಿರುದ್ದ ಘೋಷಣೆ ಕೂಗುವವರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತಂಹ ಕಾನೂನು ಜಾರಿಗೆ ತರುವ ಅವಶ್ಯಕತೆಯಿದೆ" ಎಂದು ಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಭಾನುವಾರ ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠಕ್ಕೆ ಭೇಟಿ ನೀಡಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈ ದೇಶದ ಅನ್ನ ತಿಂದು, ನೀರು ಕುಡಿದು, ಇಲ್ಲಿನ ಗಾಳಿ ಸೇವಿಸಿ ಪಾಕ್ ಪರವಾಗಿ ಘೋಷಣೆ ಕೂಗುವವರು ಈ ದೇಶದಲ್ಲಿ ಯಾಕಿರಬೇಕು. ಇಂತವರನ್ನು ದೇಶದ್ರೋಹಿಗಳೆಂದು ಪರಿಗಣಿಸಿ ಕಠಿಣ ಕ್ರಮ ತೆಗೆದುಕೊಳ್ಳುವ ಕಾನೂನು ಜಾರಿಗೆ ತರುವಂತೆ ಪ್ರಧಾನಿ ಮೋದಿ ಅವರಲ್ಲಿ ಮನವಿ ಮಾಡುತ್ತೇನೆ" ಎಂದು ತಿಳಿಸಿದರು.
"ಸಚಿವ ರಮೇಶ್ ಜಾರಕಿಹೊಳಿ ಅವರು ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ. ಕುಮಟಳ್ಳಿ ಕೂಡ ತ್ಯಾಗ ಮಾಡಿ ಬಿಜೆಪಿಗೆ ಬಂದಿದ್ದಾರೆ. ಅವರಿಗೆ ಅನ್ಯಾಯವಾಗಬಾರದು ಎಂಬುದು ನಮ್ಮ ಕಳಕಳಿ. ಸಿಎಂ ಬಿಎಸ್ವೈ ಅವರು ಯಾರಿಗೂ ಅನ್ಯಾಯ ಮಾಡುವುದಿಲ್ಲ ಎಂಬ ಭರವಸೆಯಿದೆ" ಎಂದರು.
"ಅನರ್ಹರು ಚುನಾವಣೆಯಲ್ಲಿ ಗೆಲುವು ಸಾಧಿಸಿ ಮಂತ್ರಿಗಳಾಗಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಹೀಗಾಗಿ, ಅವರಿಗೆ ಜೂನ್, ಜುಲೈನಲ್ಲಿ ಸೂಕ್ತ ಸ್ಥಾನ ಸಿಗಬಹುದು" ಎಂದು ಹೇಳಿದರು.
"ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ 17 ಜನ ಶಾಸಕರು ಹೊರಗೆ ಬಂದಿದ್ದರಿಂದ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ಸ್ಥಾನ ದೊರಕಿದೆ. ಹಾಗಾಗಿ, ನಮ್ಮನ್ನು ಅವರು ಸ್ಮರಿಸಬೇಕು. ಅವರು ಸರ್ಕಾರಿ ಕಾರು, ಬಂಗಲೆ ಇಲ್ಲದೇ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೇಸರಗೊಂಡಿದ್ದರು. ನಮ್ಮ ಬಗ್ಗೆ ಅವರಿಗೆ ಪ್ರೀತಿ ಇದೆ. ವಿರೋಧ ಪಕ್ಷದ ಸ್ಥಾನದಲ್ಲಿರುವ ಕಾರಣದಿಂದ ನಮ್ಮ ಬಗ್ಗೆ ಆರೋಪಿಸುತ್ತಿದ್ದಾರೆ" ಎಂದು ತಿಳಿಸಿದರು.
"ಕ್ಯಾಸಿನೊ ಆಡಲು ಭಾರತದ ಹಲವರು ಸಿಂಗಪುರ, ಶ್ರೀಲಂಕಾ ಸೇರಿ ಹಲವು ದೇಶಗಳಿಗೆ ಹೋಗುತ್ತಾರೆ. ಕ್ಯಾಸಿನೊ ಸೆಂಟರ್ ತೆರೆದರೆ ತಪ್ಪಿಲ್ಲ. ನಮ್ಮ ದುಡ್ಡು ವಿದೇಶದತ್ತ ಹರಿದರೆ ಭಾರತಕ್ಕೆ ಆರ್ಥಿಕ ಕೊರತೆ ಉಂಟಾಗುತ್ತದೆ. ನಮ್ಮಲ್ಲೇ ಇಂತಹ ಕ್ಯಾಸಿನೋವವನ್ನುಆರಂಭಿಸಿದರೆ ತಪ್ಪೇನಿದೆ. ಪ್ರವಾಸೋದ್ಯಮವು ಮಳೆ ಇಲ್ಲದ ಬೆಳೆ ಇದ್ದಂತೆ" ಎಂದು ಹೇಳಿದರು.