ಬೆಂಗಳೂರು, ಫೆ 23 (Daijiworld News/MB) : "ಪೌರತ್ವ ತಿದ್ದುಪಡಿ ಕಾಯ್ದೆ ವಿಚಾರವು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾದದ್ದಲ್ಲ, ಈ ವಿಚಾರ ದೇಶಕ್ಕೆ ಸಂಬಂಧಿಸಿದ್ದು. ಕಾಂಗ್ರೆಸ್ನವರು ಮಾತ್ರ ಬಿಜೆಪಿಯವರಿಗೆ ಕಾಣುತ್ತಿದ್ದಾರೆ, ಹಾಗಾಗಿ ಎಲ್ಲಾ ವಿಚಾರದಲ್ಲಿ ಕಾಂಗ್ರೆಸ್ ಮೇಲೆಯೇ ಆರೋಪ ಮಾಡುತ್ತಾರೆ" ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ ನೀಡಿದ ಕುಮ್ಮಕ್ಕು ಸಿಎಎ ವಿರೋಧ ಪ್ರತಿಭಟನೆಗಳಿಗೆ ಕಾರಣವಾಗಿದೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಸಂಬಂಧಿಸಿದಂತೆ ಭಾನುವಾರ ತಮ್ಮ ಸದಾಶಿವ ನಗರ ನಿವಾಸದ ಬಳಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಕಾಂಗ್ರೆಸ್ ಸಿಎಎ ಕುರಿತ ವಿಚಾರವನ್ನು ಜನರಿಗೆ ಬಿಟ್ಟಿದೆ. ಸಿಎಎ ವಿರೋಧ ಮಾಡುವವರು ತಮ್ಮದೇ ಆದ ರೀತಿಯಲ್ಲಿ ವಿರೋಧಿಸುತ್ತಾರೆ. ಈ ವಿಚಾರ ಈಗ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು ವಿವಿಧ ರಾಷ್ಟ್ರಗಳು ಇದನ್ನು ಗಮನಿಸುತ್ತಿದೆ. ಅನೇಕ ರಾಷ್ಟ್ರಗಳು ಈ ಕಾಯ್ದೆ ಜಾರಿಯಾದ ಬಳಿಕ ಆರ್ಥಿಕ ಕಡಿತಕ್ಕೆ ಚಿಂತನೆ ಮಾಡುತ್ತಿದೆ" ಎಂಬುದು ಸರ್ಕಾರಕ್ಕೆ ಈಗ ತಿಳಿದು ಬಂದಿದೆ ಎಂದು ಹೇಳಿದರು.
ಅಮೂಲ್ಯ ಲಿಯೋನಾ ವಿಚಾರವಾಗಿ ಮಾತನಾಡಿದ ಅವರು, "ಅಮೂಲ್ಯ ಲಿಯೋನಾ ಪರವಾಗಿ ನಿಲ್ಲುವ ಮಾತೇ ಇಲ್ಲ. ಒಂದು ಇತಿಮಿತಿಯಲ್ಲಿ ರಾಜಕಾರಣ ಮಾಡಬೇಕು. ಯಾವಾಗ ದೇಶದ ವಿಚಾರ ಬರುತ್ತದೋ ಆಗ ನಾವು ದೇಶಕ್ಕೆ ಪ್ರಮುಖ ಆದ್ಯತೆ ನೀಡಬೇಕು" ಎಂದರು.
"ನಮ್ಮ ದೇಶಕ್ಕೆ ಅಪಮಾನ ಮಾಡಿ ಬೇರೆ ದೇಶಕ್ಕೆ ಜೈಕಾರ ಹಾಕುವುದನ್ನು ಸಮರ್ಥನೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ನಾನು ಕೂಡಾ ಪ್ರೋತ್ಸಾಹ ನೀಡಲಾರೆ. ಆದರೆ ಆ ಹೆಣ್ಣು ಮಗಳು ಏನನ್ನು ಹೇಳಲು ಮುಂದಾಗಿದ್ದಳು ಎಂಬುದನ್ನು ಕೂಡಾ ನಾವು ಅರ್ಥ ಮಾಡಿಕೊಳ್ಳಬೇಕು. ಆಕೆ ಈ ಹಿಂದೆ ಒಂದು ಸಿದ್ಧಾಂತದ ಪರವಾಗಿ ಮಾತನಾಡಿರುವುದನ್ನು ನಾವು ನೋಡಿದ್ದೇವೆ. ಹಾಗಾಗಿ ಆಕೆ ಏನು ಹೇಳಲು ಮುಂದಾಗಿದ್ದಳು ಎಂಬುದು ನಮಗೆ ತಿಳಿದಿಲ್ಲ. ಈ ವಿಚಾರದಲ್ಲಿ ಆತುರ ಮಾಡುವುದು ಬೇಡ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.