ಗೋವಾ, ಫೆ.23 (DaijiworldNews/PY) : ಗೋವಾ ಬಳಿ ಭಾರತೀಯ ನೌಕಾಪಡೆಯ ತರಬೇತಿ ನಿರತ ಮಿಗ್-29ಕೆ ವಿಮಾನ ಭಾನುವಾರ ಅಪಘಾತಕ್ಕೀಡಾಗಿದ್ದು, ಅಪಾಯದಿಂದ ಪೈಲೆಟ್ ಪಾರಾಗಿದ್ದಾರೆ. ಈ ವಿಚಾರವಾಗಿ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮಿಗ್-29ಕೆ ವಿಮಾನವು ನೌಕಾ ಘಟದಲ್ಲಿ ಎಂದಿನಂತೆ ಭಾನುವಾರ ಮುಂಜಾನೆಯೂ ಸುಮಾರು 10.30ರ ಸಂದರ್ಭ ತರಬೇತಿಯಲ್ಲಿ ನಿರತವಾಗಿದ್ದ ಸಂದರ್ಭ ಅಪಘಾತಕ್ಕೀಡಾಗಿದೆ. ಈ ಸಂದರ್ಭ ಪೈಲೆಟ್ ಸುರಕ್ಷಿತವಾಗಿ ಕೆಳಗಿಳಿದಿದ್ದಾರೆ. ಅವರನ್ನು ವಶಕ್ಕೆ ಪಡೆದಿದ್ದು, ಅಪಘಾತಕ್ಕೆ ಕಾರಣವೇನೆಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಭಾನುವಾರ ಮಧ್ಯಾಹ್ನ ಭಾರತೀಯ ನೌಕಾಪಡೆಯು ಟ್ವೀಟ್ ಮಾಡಿದೆ.
ಗೋವಾದ ವಾಸ್ಕೊದಲ್ಲಿರುವ ಐಎನ್ಎಸ್ ಹಾನ್ಸಾ ನೆಲೆಯಿಂದ ವಿಮಾನವು ಹೊರಟಿತ್ತು.
ಕಳೆದ ವರ್ಷ ನವೆಂಬರ್ನಲ್ಲಿ ಗೋವಾದ ಡಬೊಲಿಮ್ನಿಂದ ವಾಡಿಕೆಯ ತರಬೇತಿ ಕಾರ್ಯಾಚರಣೆಗೆ ಹೊರಟ ಕೆಲವೇ ವೇಳೆಯಲ್ಲಿ ಭಾರತೀಯ ನೌಕಾಪಡೆಗೆ ಸೇರಿದ ಮತ್ತೊಂದು ಮಿಗ್-29ಕೆ ಫೈಟರ್ ಜೆಟ್ ಅಪಘಾತಕ್ಕೀಡಾಗಿತ್ತು.
ಈ ಸಂದರ್ಭ ಪೈಲಟ್ ಕ್ಯಾಪ್ಟನ್ ಎಂ.ಶೇಕಾಂಡ್ ಹಾಗೂ ಲೆಫ್ಟಿನೆಂಟ್ ಕಮಾಂಡರ್ ದೀಪಕ್ ಯಾದವ್ ಅವರು ಸುರಕ್ಷಿತವಾಗಿ ಕೆಳಗಿಳಿಯುವಲ್ಲಿ ಯಶಸ್ವಿಯಾಗಿದ್ದರು.
ನೌಕಾಪಡೆ ನೀಡಿದ್ದ ಹೇಳಿಕೆ ಪ್ರಕಾರ, ತರಬೇತಿಗಾಗಿ ಬಳಸುವ ವಿಮಾನಕ್ಕೆ ಪಕ್ಷಿಗಳ ಹಿಂಡು ಡಿಕ್ಕಿ ಹೊಡೆದಿತ್ತು ಹಾಗೂ ಘರ್ಷಣೆಯಿಂದಾಗಿ ಬಲಭಾಗದ ಎಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಲ್ಲದೆ ಎಡಭಾಗದ ಎಂಜಿನ್ ವಿಫಲವಾಗಿತ್ತು ಎಂದು ಹೇಳಿತ್ತು. ಗೋವಾದ ವಿಮಾನ ನಿಲ್ದಾಣವನ್ನು ನಾಗರಿಕರು ಹಾಗೂ ಮಿಲಿಟರಿ ವಿಮಾನಗಳ ಕಾರ್ಯಾಚರಣೆಗೆ ಬಳಸಲಾಗುತ್ತಿದೆ.