ನವದೆಹಲಿ, ಫೆ.23 (DaijiworldNews/PY) : ಭಾರತೀಯ ಮೂಲದ ಬಾಲಕಿ ಕಾಮ್ಯ ಕಾರ್ತಿಕೇಯನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ಹೊಗಳಿದ್ದು, 'ಮಿಷನ್ ಸಾಹಸ್ ವಿದೇಶೀ ನೆಲಕ್ಕೂ ಹಬ್ಬಿರುವುದು ತಮಗೆ ಸಂತೋಷ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ದಕ್ಷಿಣ ಅಮೆರಿಕಾದ ಅರ್ಜೆಂಟೀನಾದ 6962 ಮೀಟರ್ ಎತ್ತರದ ಮೌಂಟ್ ಅಕಾಂಕಗು ಪರ್ವತ ಏರಿದ ಅತಿಕಿರಿಯ ಪರ್ವತಾರೋಹಿಯಾದ 12 ವರ್ಷದ ಬಾಲಕಿ ಕಾಮ್ಯ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಅಲ್ಲದೇ, ಭಾರತದ ರಾಷ್ಟ್ರಧ್ವಜವನ್ನು ಎತ್ತರಕ್ಕೆ ಒಯ್ದಿದ್ದಾಳೆ ಎಂದಿದ್ದಾರೆ.
ನನ್ನ ಪ್ರೀತಿಯ ದೇಶವಾಸಿಗಳೇ, ನನ್ನ ದೇಶದ ಸಾಹಸ ಪ್ರವೃತ್ತಿಯ ಹೆಣ್ಣು ಮಕ್ಕಳ, ಮಹಿಳಾ ಉದ್ಯಮಿಗಳ ಬಗ್ಗೆ ನಮಗೆಲ್ಲರಿಗೂ ಅತ್ಯಂತ ಗೌರವವಿದೆ. ಇಂತಹ ಸಾಹಸಗಳನ್ನು, ಹಳೆಯ ದಾಖಲೆಗಳನ್ನು ಯುವ ಪೀಳಿಗೆ ಮುರಿದು ಮುಂದುವರಿಯುತ್ತಿರುವುದರ ಸಂಕೇತವಾಗಿದೆ ಎಂದು ಮೋದಿ ಹೇಳಿದ್ದಾರೆ.
ಈ ಸಂದರ್ಭದಲ್ಲಿ ನಾನು ನಿಮ್ಮೊಂದಿಗೆ ಬಾಲಕಿ ಕಾಮ್ಯ ಕಾರ್ತಿಕೇಯನ್ ಅವರ ಸಾಹಸವನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ. ದಕ್ಷಿಣ ಅಮೆರಿಕಾದ ಅತ್ಯಂತ ಎತ್ತರದ ಪರ್ವತ ಏರಿ ದೇಶಕ್ಕೆ ಕೀರ್ತಿ ತಂದಿದ್ದಾಳೆ. ಈ ಮೂಲಕ ಕಾಮ್ಯ ಕಾರ್ತಿಕೇಯನ್ ಅವರಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ. ಇನ್ನೂ ಹೆಚ್ಚಿನ ಸಾಹಸಗಳನ್ನು ಮಾಡುವ ಮೂಲಕ ಕಾಮ್ಯ ಕಾರ್ತಿಕೇಯನ್ ಇತರರಿಗೂ ಮಾದರಿಯಾಗಲಿ ಎಂದು ತಿಳಿಸಿದರು.
ಯಾವ ದೇಶ ಆರೋಗ್ಯದಲ್ಲಿ ಉತ್ತಮ ರೀತಿಯಲ್ಲಿರುತ್ತದೋ ಆ ದೇಶ ಯಾವಾಗಲೂ ಯಶಸ್ವಿನತ್ತ ಮುನ್ನಡೆಯುತ್ತದೆ. ನಮ್ಮ ದೇಶ ಭೌಗೋಳಿಕವಾಗಿಯೂ ಸಾಹಸ ಕ್ರೀಡೆಗಳಿಗೆ ಹೆಸರುವಾಸಿ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಸಾಹಸ ಕ್ರೀಡೆಗಳಿಗೆ ಉತ್ತಮ ಅವಕಾಶವಿದೆ. ಮುಂದಿನ ದಿನಗಳು ಸಾಹಸ ಕ್ರೀಡೆಗಳ ದಿನಗಳಾಗಿದ್ದು, ಇದನ್ನು ಸಾಹಸ ಪ್ರಿಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.