ನವದೆಹಲಿ, ಫೆ.23 (DaijiworldNews/PY) : "ಲಿಂಗನ್ಯಾಯ ಪಾಲಿಸುವ ಗುರಿ ಸಾಧಿಸುವ ನಿಟ್ಟಿನಲ್ಲಿ ಭಾರತದ ಸುಪ್ರೀಂ ಕೋರ್ಟ್ ಯಶಸ್ವಿಯಾಗಿದೆ" ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.
ಅಂತರಾಷ್ಟ್ರೀಯ ನ್ಯಾಯಾಂಗ ಸಮ್ಮೇಳನ-2020ರಲ್ಲಿ ನ್ಯಾಯಾಂಗ ಹಾಗೂ ಬದಲಾಗುತ್ತಿರುವ ಜಗತ್ತು ವಿಷಯವಾಗಿ ಮಾತನಾಡಿದ ಅವರು, "ಭಾರತದ ಸುಪ್ರೀಂ ಕೋರ್ಟ್ ಲಿಂಗನ್ಯಾಯ ಪಾಲಿಸುವ ಗುರಿ ಸಾಧಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದೆ" ಎಂದು ತಿಳಿಸಿದರು.
"ದಶಕದ ಹಿಂದೆಯೇ ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಗಾಗಿ ಮಾರ್ಗಸೂಚಿ ರಚಿಸುವುದರಿಂದ ಪ್ರಾರಂಭಿಸಿ, ಇತ್ತೀಚಿನ ತೀರ್ಪಿನಲ್ಲಿ ಸೇನೆಯಲ್ಲಿ ಮಹಿಳೆಗೆ ಸಮಾನ ಸ್ಥಾನಮಾನ ನೀಡುವ ಕುರಿತಾಗಿ ದೇಶದ ಸಾಮಾಜಿಕ ಪರಿವರ್ತನೆಯಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಪಾತ್ರ ವಹಿಸಿದೆ" ಎಂದು ಹೇಳಿದರು.
"ದೇಶದ ಭಾಷಾ ವೈವಿಧ್ಯವನ್ನು ಗಮನದಲ್ಲಿಟ್ಟು, ಒಂಭತ್ತು ಭಾಷೆಗಳಲ್ಲಿ ತೀರ್ಪುಗಳನ್ನು ಪ್ರಕಟಿಸಲು ಕ್ರಮ ಕೈಗೊಂಡಿರುವುದಕ್ಕೆ ಮತ್ತು ಮಧ್ಯಸ್ಥಿಕೆಯ ಮೂಲಕ ವ್ಯಾಜ್ಯಗಳನ್ನು ಪರಿಹರಿಸಲು ಉತ್ತಮವಾದ ನಿರ್ಧಾರ ಕೈಗೊಂಡಿದ್ದು, ಇದರಿಂದ ನ್ಯಾಯಾಂಗದ ಮೇಲಿನ ಒತ್ತಡ ಕಡಿಮೆಯಾಗುವುದಲ್ಲದೆ ವಿವಾದಗಳಿಗೆ ತಕ್ಷಣವೇ ಪರಿಹಾರವೂ ಸಿಗುತ್ತದೆ" ಎಂದರು.
ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ಅವರು ಮಾತನಾಡಿ, "ಈಗ ಭಾರತದ ಸುಪ್ರೀಂ ಕೋರ್ಟ್ನ ತೀರ್ಪುಗಳು ಬೇರೆ ಬೇರೆ ದೇಶಗಳ ನ್ಯಾಯಾಲಯಗಳಲ್ಲೂ ಉಲ್ಲೇಖವಾಗುತ್ತಿದ್ದು, ಭಾರತವು ಭರವಸೆಯ ದಾರಿದೀಪವಾಗಿ ಗೋಚರಿಸಲು ಆರಂಭವಾಗಿದೆ" ಎಂದು ತಿಳಿಸಿದರು.