ಬೆಂಗಳೂರು, ಫೆ 24 (Daijiworld News/MB) : "ಸಿಎಎ, ಎನ್ಆರ್ಸಿ ವಿರುದ್ಧ ದಲಿತ ಸಂಘಟನೆಗಳ ಎಲ್ಲಾ ಬಣಗಳೂ ಒಂದಾಗಿ ಹೋರಾಟ ನಡೆಸಬೇಕು" ಎಂದು ಸಾಹಿತಿ ದೇವನೂರ ಮಹಾದೇವ ತಿಳಿಸಿದರು.
ಸ್ವಾತಂತ್ರ್ಯ ಆಂದೋಲನ ಮತ್ತು ಸಮಾಜವಾದಿ ಆಂದೋಲನಗಳನ್ನು ಪುನರುಜ್ಜೀವನಗೊಳಿಸಲು ಸಮಾಜವಾದಿ ಸಮಾಗಮ, ಸಮಾಜವಾದಿ ಅಧ್ಯಯನ ಕೇಂದ್ರ, ರಾಷ್ಟ್ರಸೇವಾ ದಳವು ಹಮ್ಮಿಕೊಂಡಿದ್ದ ಸಮಾಜವಾದಿ ವಿಚಾರ ಯಾತ್ರೆಯನ್ನು ಪುರಭವನದ ಬಳಿ ಭಾನುವಾರ ಸ್ವಾಗತಿಸಿ ಅವರು ಮಾತನಾಡಿದರು.
"ಸರ್ಕಾರವು ನಿರುದ್ಯೋಗ, ಬೆಲೆ ಏರಿಕೆ, ಆರ್ಥಿಕತೆ ಕುಸಿದಿರುವ ಬಗ್ಗೆ ಜನ ಪ್ರಶ್ನಿಸಿದರೆ ಅವರ ಪೌರತ್ವದ ಕೇಳುತ್ತಿದೆ. ದೇಶದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜರುಗುತ್ತಿರುವ ಹೋರಾಟಕ್ಕೆ ಸರ್ಕಾರ ಕಿವಿಕೊಡುತ್ತಿಲ್ಲ. ಪ್ರಗತಿಪರ, ದಲಿತ ಸಂಘಟನೆಗಳು ಈ ಸಂದರ್ಭದಲ್ಲಿ ಒಂದಾಗುವ ಅವಶ್ಯಕತೆಯಿದೆ" ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ, ಸಮಾಜವಾದಿ ಮುಖಂಡ ಅಲಿಬಾಬಾ, ಕಾಂಗ್ರೆಸ್ ಮುಖಂಡರಾದ ಕವಿತಾ ರೆಡ್ಡಿ, ರೈತ ಮುಖಂಡ ವೀರಸಂಗಯ್ಯ, ಕೃಷಿ ತಜ್ಞ ಪ್ರಕಾಶ್ ಕಮ್ಮರಡಿ ಮಾತನಾಡಿದರು.
"ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದರೆ, ಹಿಟ್ಲರ್ ಆಳ್ವಿಕೆಯ ಕಾಲ ಮರುಕಳಿಸಲಿದೆ" ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಆತಂಕ ವ್ಯಕ್ತಪಡಿಸಿದರು.