ನವದೆಹಲಿ, ಫೆ 24 (Daijiworld News/MB) : ಎರಡು ದಿನಗಳ ಭಾರತ ಭೇಟಿಗಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಬೆಳಿಗ್ಗೆ 11.40ರ ಸುಮಾರಿಗೆ ಅಹಮದಾಬಾದ್ಗೆ ಆಗಮಿಸಲಿದ್ದು ಈ ಭೇಟಿಯಿಂದಾಗಿ ಆಗಬಹುದಾದ ಲಾಭದ ಕುರಿತಾಗಿ ಎರಡು ದೇಶಗಳಿಗೂ ಕುತೂಹಲವಿದೆ.
ಟ್ರಂಪ್ ಮೊಟೆರಾದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯಲಿರುವ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದು ಅವರೊಂದಿಗೆ ಪತ್ನಿ ಮೆಲಾನಿಯಾ ಟ್ರಂಪ್, ಅಧ್ಯಕ್ಷರ ಸಲಹೆಗಾರರೂ ಆಗಿರುವ ಪುತ್ರಿ ಇವಾಂಕಾ ಟ್ರಂಪ್ ಮತ್ತು ಅಳಿಯ ಜರೇದ್ ಕುಶ್ನೆರ್ ಕೂಡಾ ಪ್ರಯಾಣ ಬೆಳೆಸಿದ್ದಾರೆ.
ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೂ ಮುನ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಮೊಟೆರಾ ಸ್ಟೇಡಿಯಂವರೆಗೆ ರೋಡ್ ಶೋ ಜರುಗಲಿದೆ. ಈ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ ಎಂದು ಇತ್ತೀಚೆಗೆ ಚರ್ಚೆಗೆ ಗ್ರಾಸವಾಗಿತ್ತು. ಸುಮಾರು ಒಂದು ಕೋಟಿ ಜನರು ತಮ್ಮನ್ನು ಸ್ವಾಗತಿಸಲು ಸೇರಲಿದ್ದಾರೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ ಎಂದು ಟ್ರಂಪ್ ಶುಕ್ರವಾರ ಹೇಳಿದ್ದರು. ಆದರೆ ಅಧಿಕಾರಿಗಳು ಒಂದು ಲಕ್ಷ ಜನರು ಸೇರಲಿದ್ದಾರೆ ಎಂದು ಹೇಳಿದ್ದಾರೆ.
ಭಾರತ ಭೇಟಿಗೂ ಮುನ್ನ ವಾಷಿಂಗ್ಟನ್ನಲ್ಲಿ ವಿಮಾನ ಏರುವ ಮೊದಲೂ, "ಭಾರತದ ಜನರ ಜತೆಗೆ ಸಮಯ ಕಳೆಯುವುದನ್ನು ಎದುರು ನೋಡುತ್ತಿದ್ದೇನೆ. ಲಕ್ಷಾಂತರ ಜನರು ನಮ್ಮ ಜತೆಗೆ ಇರಲಿದ್ದಾರೆ" ಎಂದು ಹೇಳಿದ್ದಾರೆ.
ಟ್ರಂಪ್ ಸೋಮವಾರ ಸಂಜೆ ದೆಹಲಿ ತಲುಪಲಿರುವ ಹಿನ್ನಲೆಯಲ್ಲಿ ದೆಹಲಿಯಲ್ಲಿ ಬಿಗಿ ಭದ್ರತೆ ಮಾಡಲಾಗಿದೆ. ಟ್ರಂಪ್ ನೇತೃತ್ವದ ನಿಯೋಗ ಸಾಗುವ ದಾರಿಯುದ್ದಕ್ಕೂ ‘ಶಾರ್ಪ್ ಶೂಟರ್’ಗಳನ್ನು ನಿಯೋಜಿಸಲಾಗಿದೆ
ಟ್ರಂಪ್ ದೆಹಲಿಯ ಐಟಿಸಿ ಮೌರ್ಯ ಹೋಟೆಲ್ನಲ್ಲಿ ತಂಗಲಿದ್ದು ಅವರ ನಿರ್ಗಮನವರೆಗೆ ಆ ಹೊಟೇಲ್ಗೆ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹೋಟೆಲ್ನ ಎಲ್ಲ 438 ಕೊಠಡಿಗಳನ್ನು ಈ ನಿಯೋಗಕ್ಕಾಗಿ ಕಾಯ್ದಿರಿಸಲಾಗಿದೆ.
ಹಾಗೆಯೇ ಹೋಟೆಲ್ ಇರುವ ಸರ್ದಾರ್ ಪಟೇಲ್ ಮಾರ್ಗದ ಸಿ.ಸಿ.ಟಿ.ವಿ. ಕ್ಯಾಮೆರಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದ್ದು ಕತ್ತಲಿನಲ್ಲಿಯೂ ದೃಶ್ಯ ಸೆರೆಹಿಡಿಯಬಲ್ಲ ಕ್ಯಾಮೆರಾಗಳ ಅಳವಡಿಕೆ ಮಾಡಲಾಗಿದೆ. ವಾಯುಪಡೆಯ ವಿಮಾನಗಳು ಈ ಪ್ರದೇಶದ ಮೇಲೆ ನಿಗಾ ಇರಿಸಲಿವೆ.
ಈಗಾಗಲೇ ಅಮೆರಿಕದ ಸೀಕ್ರೆಟ್ ಸರ್ವಿಸ್ನ ಏಜೆಂಟರು ಭಾರತಕ್ಕೆ ತಲುಪಿದ್ದು ಭಾರತದ ಅಧಿಕಾರಿಗಳೊಂದಿಗೆ ಭದ್ರತೆ ಕುರಿತಾಗಿ ಸಮಾಲೋಚನೆ ಮಾಡಿದ್ದಾರೆ.
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಸಾಬರಮತಿ ಆಶ್ರಮ ಮತ್ತು ಮೊಟೆರಾ ಕ್ರೀಡಾಂಗಣಕ್ಕೆ ಟ್ರಂಪ್ ಸಾಗುವ ದಾರಿಯಲ್ಲಿ ಅವರನ್ನು ಸ್ವಾಗತಿಸಲು ಕನಿಷ್ಠ 50 ಸಾವಿರ ಜನ ಸೇರಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ
ಫೆ. 24 ಮತ್ತು 25ರಂದು ಭಾರತಕ್ಕೆ ಡೊನಾಲ್ಡ್ ಟ್ರಂಪ್ ಭೇಟಿ ನೀಡುತ್ತಿರುವುದನ್ನು ವಿರೋಧಿಸಿ ಸಿಪಿಎಂ ಹಾಗೂ ಸಿಪಿಐ ದೇಶದಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿವೆ.
ಕಾಂಗ್ರೆಸ್ ಉದ್ಯೋಗ ಅರಸಿ ಅಮೆರಿಕಕ್ಕೆ ತೆರಳುವವರಿಗೆ ಅಗತ್ಯವಿರುವ ಎಚ್–1ಬಿ ವೀಸಾ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಹೀಗಾಗಿ ವೀಸಾ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವ ಕುರಿತಂತೆ ಪ್ರಧಾನಿ ಮೋದಿ ಅವರು ಟ್ರಂಪ್ ಅವರಲ್ಲಿ ಪ್ರಸ್ತಾಪಿಸುವರೇ? ಎಂದು ಪ್ರಶ್ನೆ ಮಾಡಿದೆ.
ಡೋನಾಲ್ಡ್ ಟ್ರಂಪ್ ಇಂದು (ಫೆ.24 ಸೋಮವಾರ)
11.40 (ಬೆಳಿಗ್ಗೆ):ಅಹಮದಾಬಾದ್ನ ಸರ್ದಾರ್ ವಲ್ಲಭಭಾಯ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮನ
12.15 : ಅಹಮದಾಬಾದ್ನ ಸಾಬರಮತಿ ಆಶ್ರಮಕ್ಕೆ ಭೇಟಿ
1.05 : ಮೊಟೆರಾ ಕ್ರೀಡಾಂಗಣದಲ್ಲಿ "ನಮಸ್ತೆ ಟ್ರಂಪ್" ಕಾರ್ಯಕ್ರಮ
5.15 (ಸಂಜೆ): ಆಗ್ರಾದ ತಾಜ್ಮಹಲ್ಗೆ ಭೇಟಿ
7.30 : ದೆಹಲಿಗೆ ಪ್ರಯಾಣ
ನಾಳೆ (ಫೆ. 25 ಮಂಗಳವಾರ)
10.00 (ಬೆಳಿಗ್ಗೆ): ರಾಷ್ಟ್ರಪತಿ ಭವನದಲ್ಲಿ ಔಪಚಾರಿಕ ಸ್ವಾಗತ
10.30: ರಾಜ್ಘಾಟ್ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ನಮನ
11.00: ಹೈದರಾಬಾದ್ ಹೌಸ್ನಲ್ಲಿ ಟ್ರಂಪ್–ಮೋದಿ ಮಾತುಕತೆ
7.30 (ಸಂಜೆ):ರಾಷ್ಟ್ರಪತಿ ಭವನದಲ್ಲಿ ರಾಮನಾಥ ಕೋವಿಂದ್ ಭೇಟಿ
10.00: ನಿರ್ಗಮನ