ನವದೆಹಲಿ, ಫೆ 24 (Daijiworld News/MB) : "ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ್ ಸಿಂಗ್ ಅವರು ಭಾರತದ ಆರ್ಥಿಕ ಬೆಳವಣಿಗೆಯ ನಿಜವಾದ ವಾಸ್ತುಶಿಲ್ಪಿ ಮತ್ತು ಉದಾರ ಜಾಗತಿಕ ಆರ್ಥಿಕ ನಾಯಕರಾಗಿ ಹೊರಹೊಮ್ಮಿದ್ದಾರೆ" ಎಂದು ಉದಾರದಾನಿ, ಎನ್ಆರ್ಇ ಉದ್ಯಮಿ ಮತ್ತು ಕರ್ನಾಟಕ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ರೊನಾಲ್ಡ್ ಕೊಲಾಸೊ ಅವರು ಬಣ್ಣಿಸಿದ್ದಾರೆ.
ಅವರು ಫೆ. 22 ನವದೆಹಲಿಯಲ್ಲಿ "ಹೂ ಈಸ್ ಭಾರತ್ ಮಾತಾ?"("ಯಾರು ಭಾರತ ಮಾತೆ?") ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದರು. ಪ್ರೊ. ಪುರುಷೋತ್ತಮ್ ಅವರು ಆಂಗ್ಲ ಭಾಷೆಯಲ್ಲಿ ಬರೆದಿರುವ ಈ ಪುಸ್ತಕವನ್ನು ಕನ್ನಡಕ್ಕೆ ಪ್ರೊ. ರಾಧಾಕೃಷ್ಣ ಅವರು ಅನುವಾದಿಸಿದ್ದು ಮಾಜಿ ಪ್ರಧಾನಿ ಡಾ.ಮನಮೋಹನ್ ಬಿಡುಗಡೆ ಮಾಡಿದರು.
"ದೇಶವು ಆರ್ಥಿಕ ಕುಸಿತದ ಅಂಚಿನಲ್ಲಿದ್ದ ಸಮಯದಲ್ಲಿ ಅತೀ ಮುಖ್ಯವಾಗಿರುವ ಆರ್ಥಿಕ ಸುಧಾರಣೆಗಳನ್ನು ಮಾಡಿದ್ದಕ್ಕಾಗಿ ಭಾರತ ದೇಶದ ಜನರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿರಬೇಕು" ಎಂದು ಶ್ಲಾಘಿಸಿದರು.
"ಭಾರತವು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಆರ್ಥಿಕ ಉದಾರೀಕರಣ, ಜಾಗತೀಕರಣ, ಆಧುನೀಕರಣ, ವಿದ್ಯುನ್ಮಾನೀಕರಣ, ಗಣಕೀಕರಣವನ್ನು ಜಾರಿಗೆ ತರುವ ಮೂಲಕ ಅದಃಪತನದ ಕಡೆ ಮುಖ ಮಾಡಿದ್ದ ಭಾರತದ ಆರ್ಥಿಕತೆಯನ್ನು ಸಂಪೂರ್ಣ 180 ಡಿಗ್ರಿಗಳಲ್ಲಿ ಹಿಂದಕ್ಕೆ ಕೊಂಡು ಬರುವಲ್ಲಿ ಮನಮೋಹನ್ ಸಿಂಗ್ ಅವರು ಕೈಗೊಂಡ ದಿಟ್ಟ ಕ್ರಮಗಳು ಭಾರತದ ಹಾದಿಯನ್ನು ಸುಗಮಗೊಳಿಸಿತು. ಆರ್ಥಿಕ ಕುಸಿತವಾದ ಸಂದರ್ಭದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತೀವ್ರ ವಿರೋಧ ಮಾಡಿದ್ದು ಆ ನಡುವೆಯೂ ನೀವು ಎದುರಿಸಿದ್ದೀರಿ" ಎಂದು ಕೊಲಾಸೊ ಹೇಳಿದರು.
"ದೇಶಕ್ಕೆ ಆಧುನಿಕ ಸ್ವಯಂಚಾಲಿತ ಮತ್ತು ಸುಸಜ್ಜಿತ ಆರ್ಥಿಕ ಬೇಕರಿ ಒದಗಿಸಿದ ಖ್ಯಾತಿ ಮನ್ಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ. ಯಾವ ಸರ್ಕಾರ ಅಧಿಕಾರದಲ್ಲಿದ್ದರೂ ಅದು ಈ ಆರ್ಥಿಕ ಬೇಕರಿಯನ್ನು ಬಳಸಿಕೊಳ್ಳಬಹುದು ಮತ್ತು ಕೇಕ್ ತಯಾರಿಸಿ ವಿತರಿಸಬಹುದು. ಅವರು ಬಣ್ಣ, ಆಕಾರ, ಗಾತ್ರ ಅಥವಾ ಪರಿಮಳವನ್ನು ತುಂಬಬಹುದು. ಆದರೆ ಭಾರತದ ತ್ವರಿತ ಆರ್ಥಿಕ ಪರಿವರ್ತನೆಯ ನಿಜವಾದ ವಾಸ್ತುಶಿಲ್ಪಿ ನೀವು ಎಂದು ಎಲ್ಲರಿಗೂ ತಿಳಿದಿರುವ ಸತ್ಯ" ಎಂದು ಅವರು ಮನಮೋಹನ್ ಸಿಂಗ್ ಅವರನ್ನು ಶ್ಲಾಘಿಸಿದರು.
ಪ್ರೊ.ಪುರುಷೋತಮ್ ಅಗರ್ವಾಲ್ ಅವರ ಪುಸ್ತಕವು ವಿಶ್ವದಾದ್ಯಂತದ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂದು ಹೇಳಿ ಪ್ರೊ.ಪುರುಷೋತಮ್ ಅವರನ್ನು ಅಭಿನಂದಿಸಿದರು. "ಈ ಪುಸ್ತಕದ ಮೂಲಕ ನಾವು ನೆಹರು ಅವರನ್ನು ಪುನಃ ಭೇಟಿಯಾದಂತ ಭಾವನೆ ಮೂಡಿಸುವಲ್ಲಿ ನೀವು ಪ್ರಮುಖ ಪಾತ್ರ ವಹಿಸಿದ್ದೀರಿ. ಭಾರತದ ಆರ್ಥಿಕ ಅಭಿವೃದ್ಧಿ, ರಾಷ್ಟ್ರೀಯ ಏಕೀಕರಣ, ಏಕತೆ ಮತ್ತು ಸಹಿಷ್ಣುತೆಗೆ ಬಲವಾದ ಅಡಿಪಾಯ ಹಾಕಿದ ಅವರು ನಮ್ಮ ದೇಶದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಪ್ರಧಾನ ಮಂತ್ರಿ" ಎಂದು ಹೇಳಿದರು.
"ಪ್ರೊ. ರಾಧಾ ಕೃಷ್ಣ ಕೊಲಾಕೊ ಅವರೊಂದಿಗಿನ 48 ವರ್ಷಗಳ ನಡುವಿನ ನಿಕಟ ಸಂಬಂಧವನ್ನು ನೆನಪಿಸಿಕೊಳ್ಳುತ್ತಾ, ರಾಧಾಕೃಷ್ಣ ಅವರು ಆಂಗ್ಲ ಪ್ರಾಧ್ಯಾಪಕರಾಗಿದ್ದ ಕಾಲೇಜಿನಲ್ಲಿ ಕೊಲಾಸೊ ಅವರು ವಿದ್ಯಾರ್ಥಿಯಾಗಿದ್ದರು ಎಂದು ಅವರು ತಿಳಿಸಿದರು. ಪ್ರೊ. ರಾಧಾಕೃಷ್ಣ ಅವರು ಉತ್ತಮ ನಾಟಕಕಾರ, ಬರಹಗಾರ, ಕವಿ, ಕಾದಂಬರಿಕಾರ, ಅಂಕಣಕಾರ ಮತ್ತು ಅವರು ಭಾರತೀಯ ಶಾಸ್ತ್ರೀಯ ವಿದ್ವಾಂಸರು. ಅವರು ಬಹುಭಾಷಾ ವಿದ್ವಾಂಸರಾಗಿದ್ದು ಇಂಗ್ಲಿಷ್, ಕನ್ನಡ, ಸಂಸ್ಕೃತ ಮತ್ತು ತುಳು ಭಾಷೆಗಳನ್ನು ಚೆನ್ನಾಗಿ ಹಿಡಿತ ಹೊಂದಿದ್ದಾರೆ. ಅವರು 7 ಸಂಪುಟ 5000 ಪುಟಗಳ ಜೈನ ಮಹಾಪುರಾಣ ಪುಸ್ತಕವನ್ನು ಹೊರತುಪಡಿಸಿ 34 ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಜೈನ ಮಹಾಪುರಾಣ ಪ್ರಕಟಣೆಗೆ ಸಿದ್ಧವಾಗಿದೆ. ಉನ್ನತ ಶಿಕ್ಷಣಕ್ಕಾಗಿ ಪ್ರೊ. ರಾಧಾಕೃಷ್ಣ ಅವರು ಸುಮಾರು 40 ವರ್ಷಗಳಿಂದ ಸೇವೆ ಸಲ್ಲಿಸಿದ್ದಾರೆ ಮತ್ತು ವೈವಿಧ್ಯಮಯ ವಿಷಯಗಳ ಕುರಿತು ಅನೇಕ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ" ಎಂದು ಅವರು ಹೇಳಿದರು.
"ಪುಸ್ತಕವನ್ನು ಕನ್ನಡ ಭಾಷೆಗೆ ಅನುವಾದ ಮಾಡಿದಕ್ಕಾಗಿ ಪ್ರೊ. ರಾಧಾಕೃಷ್ಣ ಅವರನ್ನು ರೊನಾಲ್ಡ್ ಕೊಲಾಸೊ ಅವರು ಅಭಿನಂದಿಸಿದರು. ನಾವು ನಿಮ್ಮ ಬಗ್ಗೆ ಹೆಮ್ಮೆಪಡುತ್ತೇವೆ. ಹಾಗೆಯೇ ಈ ಪುಸ್ತಕವನ್ನು 60 ಮಿಲಿಯನ್ ಕನ್ನಡಿಗರಿಗೆ ತಿಳಿದಿರುವ ಭಾಷೆಯಲ್ಲಿ ಮತ್ತು ಅವರ ಹೃದಯಕ್ಕೆ ಹತ್ತಿರವಿರುವ ಭಾಷೆಯಲ್ಲಿ ಹೊರತಂದಿರುವುದು ಗೌರವವೆಂದು ಭಾವಿಸುತ್ತೇನೆ" ಎಂದು ಅಭಿಪ್ರಾಯಪಟ್ಟರು.
ಹಾಗೆಯೇ, "ದೇಶದಲ್ಲಿ ವಿವಾದಗಳು, ಅಪನಂಬಿಕೆ, ನಕಲಿ ಸುದ್ದಿಗಳು ಜನರಲ್ಲಿ ಉದ್ವೇಗಕ್ಕೆ ಒಳಗಾಗುವಂತೆ ಮಾಡಿ ಈ ಸಮಾಜದಲ್ಲಿ ವಿಭಜನೆಗೆ ಕಾರಣವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಈ ಪುಸ್ತಕವು ಸಾಮಾಜಿಕ ಉದ್ವೇಗವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಜಾತಿ, ಮತ ಭಾಷೆ ಮತ್ತು ಧರ್ಮವನ್ನು ಲೆಕ್ಕಿಸದೆ ಪರಸ್ಪರ ಗೌರವದಿಂದ ಶಾಂತಿ ಮತ್ತು ಘನತೆಯಿಂದ ಬದುಕಲು ಸಹಾಯ ಮಾಡುತ್ತದೆ" ಎಂದರು.
ಈ "ಯಾರು ಭಾರತ ಮಾತೆ" ಪುಸ್ತಕವು ನೆಹರು ಅವರ ಪ್ರಬಂಧಗಳು, ಭಾಷಣಗಳು, ಸಂದರ್ಶನಗಳು ಹಾಗೂ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ವರ್ಷಗಳ ಪತ್ರಗಳ ಸಂಗ್ರಹವಾಗಿದೆ. ದೇಶಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ನೆಹರು ನೀಡಿದ ಕೊಡುಗೆಗಳ ಒಂದು ನೋಟವನ್ನು ನೀಡುತ್ತದೆ.