ಕೊಲ್ಲಂ, ಫೆ.24 (DaijiworldNews/PY) : ಕೇರಳದ ಕೊಲ್ಲಂ ಜಿಲ್ಲೆಯ ಕುಳತ್ತುಪುಳದಲ್ಲಿ 7.62 ಎಂಎಂ ಅಳತೆಯ 14 ಸಜೀವ ಗುಂಡುಗಳು ದೊರೆತಿದ್ದು, ಅವು ಪಾಕಿಸ್ತಾನದಿಂದ ಬಂದಿವೆ ಎಂಬ ಬಲವಾದ ಅನುಮಾನವನ್ನು ಕೇರಳ ಪೊಲೀಸರು ವ್ಯಕ್ತಪಡಿಸಿದದ್ದಾರೆ.
ಈಗ ದೊರೆತಿರುವ ಎಲ್ಲಾ ಗುಂಡುಗಳ ಮೇಲೆ ಪಿಒಎಫ್ (ಪಾಕಿಸ್ತಾನ್ ಆರ್ಡಿನೆನ್ಸ್ ಫ್ಯಾಕ್ಟರೀಸ್) ಎಂಬ ಗುರುತು ಇರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಈ ಆಘಾತಕಾರಿ ಬೆಳವಣಿಗೆಯ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸಲು ಉಗ್ರ ನಿಗ್ರಹ ದಳದ ಡಿಜಿಐ ನೇತೃತ್ವದಲ್ಲಿ ಕೇಂದ್ರ ಹಾಗೂ ಇತರ ರಾಜ್ಯಗಳ ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ ಸರಕಾರ ಆದೇಶ ಹೊರಡಿಸಿದೆ.
ತಮಿಳುನಾಡು ಗಡಿಭಾಗದಿಂದ 60 ಕಿ.ಮೀ ದೂರದಲ್ಲಿರುವ ಕುಳತ್ತುಪುಳದ ಸೇತುವೆ ಮೇಲೆ ಬೈಕ್ನಲ್ಲಿ ಹೋಗುತ್ತಿದ್ದ ಇಬಬರು ವ್ಯಕ್ತಿಗಳಿಗೆ ಅನುಮಾನಾಸ್ಪದ ಕವರ್ ಒಂದು ದೊರೆತಿದ್ದು, ಅದರೊಳಗೆ ಗುಂಡುಗಳಿದ್ದವು. ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬುಲೆಟ್ಗಳನ್ನು ಲಾಂಗ್-ರೇಜ್ ರೈಫಲ್ಗಳಲ್ಲಿ ಬಳಸಲಾಗುತ್ತದೆ ಎಂದು ಡಿಜಿಪಿ ಲೋಕನಾಥ್ ಬೆಹೆರಾ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿಯನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ನೀಡಲಾಗಿದೆ. ವಿವಿಧ ರಾಜ್ಯಗಳ ಜೊತೆಗೂ ಚರ್ಚೆ ನಡೆಸಿ ತನಿಖಾ ತಂಡ ರಚಿಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದು, ಕೇರಳದೊಂದಿಗೆ ಗಡಿ ಹಂಚಿಕೊಂಡು ಕರ್ನಾಟಕ ಹಾಗೂ ತಮಿಳುನಾಡು ಅಧಿಕಾರಿಗಳು ತನಿಖಾ ತಂಡದಲ್ಲಿರುವ ಸಾಧ್ಯತೆಯಿದೆ.