ಕಲಬುರ್ಗಿ, ಫೆ 24 (Daijiworld News/MB) : "ಭಾರತಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿಯಿಂದಾಗಿ ಯಾವುದೇ ಪ್ರಯೋಜನವಿಲ್ಲ" ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಭಾರತಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಭೇಟಿಯಿಂದಾಗಿ ಯಾವುದೇ ಪ್ರಯೋಜನವಿಲ್ಲ. ಅಮೆರಿಕಕ್ಕೆ ಮೋದಿಯೂ ಭೇಟಿ ನೀಡಿದ್ದರು, ಅದರಿಂದಾಗಿ ಯಾವುದಾದರೂ ಲಾಭವಾಯಿತೇ" ಎಂದು ಹೇಳಿದ್ದಾರೆ.
"ಭಾರತ ಅಮೆರಿಕದೊಂದಿಗೆ ಯಾವುದೇ ಆಮದು ಒಪ್ಪಂದಕ್ಕೆ ಮುಂದಾಗಬಾರದು" ಎಂದು ಆಗ್ರಹಿಸಿದರು.
ಅಧ್ಯಕ್ಷ ಹುದ್ದೆಗಳಿಗೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, "ರಾಹುಲ್ ಗಾಂಧಿಯೇ ಪುನಃ ಎಐಸಿಸಿ ಅಧ್ಯಕ್ಷರಾಗಬೇಕು. ಶೀಘ್ರದಲ್ಲಿಯೇ ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಕಾತಿ ಮಾಡಲಾಗುತ್ತದೆ" ಎಂದು ಹೇಳಿದರು.
"ಕರ್ನಾಟಕಕ್ಕೆ ಹದಿನೈದನೇ ಹಣಕಾಸು ಆಯೋಗದಿಂದ ಬಹಳ ಅನ್ಯಾಯವಾಗಿದೆ. ಈ ವರ್ಷ ಒಂಬತ್ತು ಸಾವಿರ ಕೋಟಿ ಕಡಿಮೆಯಾಗಿದೆ. ಮುಂದಿನ ವರ್ಷ ₹ 11258 ಕೋಟಿ ಕಡಿಮೆಯಾಗಲಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇಪ್ಪತ್ತೈದು ಜನ ಸಂಸದರು ಏನು ಮಾಡ್ತಿದ್ದಾರೆ?" ಎಂದು ಪ್ರಶ್ನಿಸಿದರು.
"ನಮಗೆ ಪ್ರವಾಹ ಬಂದಾಗಲು ಹೆಚ್ಚಿನ ಪರಿಹಾರ ನೀಡಲಿಲ್ಲ. ಯಡಿಯೂರಪ್ಪ ಸರ್ವಪಕ್ಷಗಳ ನಿಯೋಗ ಕರೆದುಕೊಂಡು ಹೋಗಲಿಲ್ಲ. ಯಡಿಯೂರಪ್ಪ ಅವರು ಮೋದಿ ಮತ್ತು ಅಮಿತ್ ಶಾ ಅವರಿಗೆ ಭಯಪಡುತ್ತಾರೆ. ಅತ್ಯಂತ ದುರ್ಬಲ ಮುಖ್ಯಮಂತ್ರಿ ಯಡಿಯೂರಪ್ಪ" ಎಂದು ಟೀಕೆ ಮಾಡಿದರು.
'ಬಿಜೆಪಿಯಲ್ಲಿರುವ ಅನೇಕರು ಅವರ ಪಕ್ಷ ತೊರೆಯಲು ಸಿದ್ದರಾಗಿದ್ದಾರೆ. ಬಿಜೆಪಿಯಲ್ಲಿ ತಳಮಳ ಶುರುವಾಗಿದೆ. ಅಧಿಕಾರಕ್ಕಾಗಿ ಕಚ್ಚಾಟವೂ ಆರಂಭವಾಗಿದೆ. ಅವರ ಈ ಕಚ್ಚಾಟದಿಂದಾಗಿ ಸರ್ಕಾರ ಬಿದ್ದಲ್ಲಿ ಮತ್ತೆ ಅಧಿಕಾರ ಹಿಡಿಯುವ ಯೋಚನೆ ಇಲ್ಲ. ಇದನ್ನು ಕಾಂಗ್ರೆಸ್ ಸದುಪಯೋಗ ಮಾಡಿಕೊಳ್ಳುವುದಿಲ್ಲ. ಆದರೆ ಬಿಜೆಪಿಗೇ ನಷ್ಟವಾಗಲಿದೆ" ಎಂದು ಅವರು ಅಭಿಪ್ರಾಯಪಟ್ಟರು.