ಕಲಬುರಗಿ, ಫೆ 24 (Daijiworld News/MB) : "ನಮ್ಮ ಸರ್ಕಾರ ಸುಭದ್ರವಾಗಿದೆ. ನಾವು ಈ ಅವಧಿ ಮುಗಿಸಿ 2023ರಲ್ಲೂ ಮತ್ತೆ ಅಧಿಕಾರ ಗಳಿಸುತ್ತೇವೆ" ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥನಾರಾಯಣ ಹೇಳಿದ್ದಾರೆ.
ಕಲಬುರಗಿ ಪ್ರವಾಸ ಮಾಡುತ್ತಿರುವ ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಮಾಧ್ಯಮದೊಂದಿಗೆ 32 ಶಾಸಕರು ಬಿಜೆಪಿಗೆ ರಾಜೀನಾಮೆ ನೀಡುತ್ತಾರೆ ಎಂಬ ಇಬ್ರಾಹೀಂ ಅವರ ಹೇಳಿಕೆ ಕುರಿತಾಗಿ ಮಾತನಾಡಿ, "ಅವರು ಯಾವ 32 ಜನರ ಕುರಿತಾಗಿ ಹೇಳುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಅವರ ಪಕ್ಷದಿಂದಲ್ಲೇ 32 ಜನರು ಹೊರಬರುತ್ತಾರೋ ಏನು ತಿಳಿದಿಲ್ಲ. ನಮ್ಮ ಪಕ್ಷದಲ್ಲಂತ್ತು ಅಂತಹ ಯಾವುದೇ ಸಮಸಯೆಗಳು ಇಲ್ಲ| ಎಂದು ಹೇಳಿದರು.
"ಪ್ರಸ್ತುತ ಜೆಡಿಎಸ್, ಕಾಂಗ್ರೆಸ್ ನಡುವೆ ಯಾವುದೇ ಹೊಂದಾಣಿಕೆಯಿಲ್ಲ. ನಮ್ಮ ಸರ್ಕಾರಕ್ಕೆ ಸಿದ್ಧರಾಮಯ್ಯ ಹಾಗೂ ಕುಮಾರಸ್ವಾಮಿ ಬೆಂಬಲಿಸಿದ್ದಾರೆ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅವಧಿ ಪೂರ್ಣ ಮಾಡುವುದು ಖಚಿತ" ಎಂದು ಅವರು ಹೇಳಿದರು.
"ಎನ್ಕೆ ಸಿಂಗ್ ನೇತೃತ್ವದಲ್ಲಿ 15 ನೇ ಹಣಕಾಸು ಆಯೋಗ ತನ್ನದೇ ಆದ ಮಾನದಂಡವನ್ನು ಅಳವಡಿಕೆ ಮಾಡಿದೆ. ಅನುದಾನ ಹಂಚಿಕೆ ಮಾಡುವಲ್ಲಿ ಸ್ವಲ್ಪ ಏರುಪೇರು ಆಗುತ್ತದೆ. ಈ ಕುರಿತಾಗಿ ಸಿಎಂ ಹಾಗೂ ಮುಖ್ಯ ಕಾರ್ಯದರ್ಶಿಗಳು ಚರ್ಚಿಸಿದ್ದಾರೆ. ರಾಜ್ಯಕ್ಕೆ ಆಗುತ್ತಿರುವ ಸಮಸ್ಯೆಗಳ ಕುರಿತಾಗಿ ಮನವರಿಕೆ ಮಾಡಿಕೊಡುತ್ತಾರೆ. ರಾಜ್ಯಕ್ಕೆ ಕೇಂದ್ರದಿಂದ ಯಾವ ಸಮಸ್ಯೆಯೂ ಆಗುವುದಿಲ್ಲ" ಎಂದು ಅವರು ತಿಳಿಸಿದರು.
"ಅಮೆರಿಕ ಎಂದರೆ ದೊಡ್ಡಣ್ಣ ಎಂದು ಕರೆಯುವ ಕಾಲವಿದು. ಈಗ ಭಾರತವೂ ಸದೃಢವಾಗಿ ಬೆಳೆದಿದ್ದು ಆ ದೊಡ್ಡ ರಾಷ್ಟ್ರದೊಂದಿಗೆ ವ್ಯವಹಾರ ಮಾಡಲು ಮುಂದಾಗಿದೆ. ಇದು ಭಾರತೀಯರು ಅಭಿಮಾನ ಪಡುವ ವಿಚಾರ. ಅಮೆರಿಕಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದ ಸಂದರ್ಭದಲ್ಲಿಯೂ ಇದೇ ರೀತಿಯಾಗಿ ಅಪಾರ ಗೌರವ, ಮನ್ನಣೆ ನೀಡಿದ್ದಾರೆ. ಟ್ರಂಪ್ ಭೇಟಿಯಿಂದಾಗಿ ಉಭಯ ರಾಷ್ಟ್ರಗಳ ನಡುವಿನ ಸ್ನೇಹ ಸಂಬಂಧ ಹೆಚ್ಚಾಗುತ್ತದೆ. ಇದರಿಂದಾಗಿ ಅಮೆರಿಕಕ್ಕೆ ತೆರಳುವ ನಮ್ಮ ದೇಶದ ಯುವಕರಿಗೆ ಹೆಚ್ಚು ಅವಕಾಶಗಳು ಸಿಗುತ್ತದೆ" ಎಂದು ಅವರು ಹೇಳಿದ್ದಾರೆ.