ಬೆಂಗಳೂರು, ಫೆ.24 (DaijiworldNews/PY) : "ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಬಂದಿರುವುದು ಸಂತೋಷವನ್ನುಂಟು ಮಾಡಿದೆ. ಸಿದ್ದರಾಮಯ್ಯ ಅವರು ಎಲ್ಲವನ್ನೂ ಕಾಮಾಲೆ ಕಣ್ಣುಗಳಿಂದ ನೋಡುವುದನ್ನು ಬಿಡಬೇಕು" ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಅಗ್ರಹಾರ ಪಾಳ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಡೊನಾಲ್ಡ್ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದರು. ಟ್ರಂಪ್ ಅವರು ಎಲ್ಲಿ ಸಿದ್ದರಾಮಯ್ಯ ಅವರು ಎಲ್ಲಿ. ಸಿದ್ದರಾಮಯ್ಯ ಸಿದ್ದರಾಮಯ್ಯ ಅವರೆ, ಟ್ರಂಪ್, ಟ್ರಂಪ್ ಅವರೇ, ಮೋದಿ ಮೋದಿ ಅವರೆ. ಈ ವಿಚಾರವಾಗಿ ಸಿದ್ದರಾಮಯ್ಯ ಸಾಹೇಬರಿಗೆ ಏನು ಗೊತ್ತು" ಎಂದು ಹೇಳಿದರು.
"ಪ್ರಧಾನಿ ಮೋದಿ ಅವರು ಚಿಂತನೆ, ದೂರದೃಷ್ಟಿಯಿಂದ ಅವರ ರಾಷ್ಟ್ರಕ್ಕೆ ನೀಡಬೇಕಾದ ದೊಡ್ಡ ಸಂದೇಶ ನೀಡುತ್ತಾರೆ. ಟ್ರಂಪ್ ಅವರು ಏನು ಮಾಡುತ್ತಾರೋ ಎನ್ನುವುದಕ್ಕಿಂತ ಅವರು ಹಿರಿಯಣ್ಣ. ಅವರು ಭಾರತಕ್ಕೆ ಭೇಠಿ ನೀಡುರುವು ಸಂತೋಷದ ವಿಚಾರ. ಆದರೆ, ಸಿದ್ದರಾಮಯ್ಯ ಅವರು ಎಲ್ಲವನ್ನೂ ಕಾಮಾಲೆ ಕಣ್ಣುಗಳಿಂದ ನೋಡುವುದನ್ನು ಬಿಡಬೇಕು. ಅವರು ದೂರದೃಷ್ಟಿಯಲ್ಲಿ ನೋಡಬೇಕು" ಎಂದರು.
"ಸಿದ್ದರಾಮಯ್ಯ ಅವರು 5 ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ನೀವು ಎತ್ತರಕ್ಕೆ ಬೆಳೆದ ವ್ಯಕ್ತಿ. ಈ ರೀತಿಯಾಗಿ ಮಾತನಾಡುವುದು ಬೇಡ" ಎಂದು ಹೇಳಿದರು.