ನವದೆಹಲಿ, ಫೆ 24 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ–ವಿರೋಧಿ ಗುಂಪುಗಳ ನಡುವೆ ಈಶಾನ್ಯ ದೆಹಲಿಯ ಜಾಫರಾಬಾದ್, ಭಜನ್ಪುರ್ ಹಾಗೂ ಮೌಜ್ಪುರ್ ಪ್ರದೇಶಗಳಲ್ಲಿ ಘರ್ಷಣೆಯು ಮುಂದುವರಿದಿದೆ.
ಪ್ರತಿಭಟನಕಾರರು ಸೀಲಾಂಪುರ– ಮೌಜ್ಪುರ ಮತ್ತು ಯಮುನಾ ವಿಹಾರ್ಗೆ ಸಂಪರ್ಕ ಕಲ್ಪಿಸುವ ಜಾಫರಾಬಾದ್ ಮೆಟ್ರೊ ರೈಲು ನಿಲ್ದಾಣದ ಬಳಿ ಬೆಂಕಿ ಹಚ್ಚಿದ್ದು ದೆಹಲಿಯಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಈ ಘಟನೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಈ ಬಗ್ಗೆ ಟ್ವೀಟ್ ಮಾಡಿ, "ದೆಹಲಿಯ ಕೆಲವು ಪ್ರದೇಶಗಳಲ್ಲಿ ಶಾಂತಿ ಮತ್ತು ಸಾಮರಸ್ಯ ಕದಡುವ ಸುದ್ದಿಗಳು ತೀವ್ರ ಆತಂಕ ಉಂಟು ಮಾಡಿದೆ. ಶಾಂತಿ ಮತ್ತು ಸಾಮರಸ್ಯ ನೆಲಸುವ ನಿಟ್ಟಿನಲ್ಲಿ ಲೆಫ್ಟಿನೆಂಟ್ ಗವರ್ನರ್ ಮತ್ತು ಕೇಂದ್ರ ಗೃಹ ಸಚಿವರು ಕ್ರಮಕೈಗೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.
ಈ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆಸಿದ್ದು ಹಿಂಸಾಚಾರ ನಿಯಂತ್ರಣಕ್ಕೆ ತರಲು ಪೊಲೀಸರು ಪ್ರಯತ್ನ ನಡೆಸುತ್ತಿದ್ದಾರೆ. ಭಾನುವಾರ ಎರಡು ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿದ್ದು ಗುಂಪು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗ ಬಳಸಿದ್ದರು.