ಬೆಂಗಳೂರು, ಫೆ.24 (DaijiworldNews/PY) : "ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿಯಿಂದ ಅಮೇರಿಕಾ ಹಾಗೂ ಭಾರತದ ಬಾಂಧವ್ಯ ವೃದ್ದಿಗೆ ಸಹಕಾರಿಯಾಗುತ್ತದೆ" ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ಧಾರೆ.
ಬೆಂಗಳೂರಿನ ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭೇಟಿ ಕೇವಲ ವ್ಯವಹಾರಿಕ ಭೇಟಿಯಾಗಿದ್ದರೆ ಹಿಂದಿನ ಅಮೇರಿಕಾ ಅಧ್ಯಕ್ಷರುಗಳು ಮಾಡಿದಂತೆ ದೆಹಲಿಗೆ ಬಂದು ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡು ಪುನಃ ಹೋಗುತ್ತಿದ್ದರು. ಟ್ರಂಪ್ ಅವರ ಈ ಭೇಟಿಯಿಂದ ಅಮೇರಿಕಾ ಹಾಗೂ ಭಾರತದ ಬಾಂಧವ್ಯ ವೃದ್ದಿಗೆ ಸಹಕಾರಿಯಾಗುತ್ತದೆ" ಎಂದು ತಿಳಿಸಿದರು.
"ಈಗ ಕಾಂಗ್ರೆಸ್ಸಿಗರಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವುದು ಬಿಟ್ಟು ಬೇರೆ ಕೆಲಸವೇ ಇಲ್ಲ ಮಲ್ಲಿಕಾರ್ಜುನ ಖರ್ಗೆ ಅವರಂತಹ ಹಿರಿಯ ನಾಯಕರಿಂದ ಇಂತಹ ಕೀಳು ಮಟ್ಟದ ಟೀಕೆ ನಿರೀಕ್ಷಿಸಿರಲಿಲ್ಲ" ಎಂದರು.
"ಮಹಾದಾಯಿ ಯೋಜನೆ ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಒಂದು ವಾರ ಅಥವಾ ಆರು ತಿಂಗಳು ಸಮಯಾವಕಾಶ ಬೇಕೆಂದಿಲ್ಲ. ಗೆಜೆಟ್ ನೊಟೀಫಿಕೇಶನ್ ಹೊರಡಿಸಲು ಸುಪ್ರಿಂಕೋರ್ಟ್ ಆದೇಶ ಕೊಟ್ಟಾಗಿದೆ. ಶೀಘ್ರವೇ ಗೆಜೆಟ್ ನೋಟಿಫಿಕೇಶನ್ ಹೊರಡಿಸುವಂತೆ ಕೇಂದ್ರವನ್ನು ಒತ್ತಾಯಿಸುತ್ತೇವೆ. ಅದಕ್ಕಾಗಿ ಕೇಂದ್ರದ ಬಳಿ ನಿಯೋಗದಲ್ಲಿ ತೆರಳಲು ಉದ್ದೇಶಿಸಿದ್ದೇವೆ" ಎಂದು ಹೇಳಿದರು.