ನವದೆಹಲಿ, ಫೆ.25 (DaijiworldNews/PY) : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ-ವಿರೋಧಿ ಗುಂಪುಗಳ ನಡುವೆ ಈಶಾನ್ಯ ದೆಹಲಿಯ ಜಾಫರಾಬಾದ್, ಭಜನ್ಪುರ್ ಹಾಗೂ ಮೌಜ್ಪುರ್ ಪ್ರದೇಶಗಳಲ್ಲಿ ಘರ್ಷಣೆಯಲ್ಲಿ ನಾಲ್ವರು ನಾಗರಿಕರ ದೇಹಗಳ ಮೇಲೆ ಗುಂಡೇಟಿನ ಗುರುತುಗಳು ಪತ್ತೆಯಾಗಿದ್ದು, ಮೃತಪಟ್ಟ ಪೊಲೀಸ್ ಹೆಡ್ಕಾನ್ಸ್ಟೇಬಲ್ ಕಲ್ಲೇಟಿನಿಂದ ತಲೆಗೆ ಆದ ಗಾಯ ಕಾರಣ. ಘಟನೆಯ ಸಂದರ್ಭ ಗಾಯಗೊಂಡವರಲ್ಲಿಯೂ ಹೆಚ್ಚಿನವರು ಗುಂಡೇಟು ತಿಂದಿದ್ದಾರೆ.
ಗುರು ತೇಜ್ ಬಹದ್ದೂರ್ ಆಸ್ಪತ್ರೆಯ ವೈದ್ಯರಿಗೆ ಗಾಯಗೊಂಡವರ ನಿಖರ ಸಂಖ್ಯೆ ತಿಳಿಯಲು ಸಾಧ್ಯವಾಗಿಲ್ಲ. ಸುಮಾರು 57 ಗಾಯಾಳುಗಳನ್ನು ಸೋಮವಾರ ರಾತ್ರಿಯವರೆಗೆ ಆಸ್ಪತ್ರೆಗೆ ಕರೆತರಲಾಯಿತು. ಇದರಲ್ಲಿ ಹೆಚ್ಚಿನ ಜನರ ಸ್ಥಿತಿ ಚಿಂತಾಜನಕವಾಗಿತ್ತು ಎಂದು ಹೆಸರು ಹೇಳಲು ಬಯಸದ ವೈದ್ಯರ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಹೆಚ್ಚಿನ ಜನರ ಮೈಮೇಲೆ ಗುಂಡೇಟಿನ ಹಾಗೂ ಕಲ್ಲೇಟಿನ ಗಾಯಗಳಿದ್ದವು. ಕೆಲವರಿಗೆ ಇರಿದ ಗಾಯಗಳಿದ್ದವು. ಒಬ್ಬನಿಗೆ ಪೆಟ್ರೋಲ್ ಬಾಂಬ್ನಿಂದ ತೀವ್ರ ಸುಟ್ಟಗಾಯಗಳಾಗಿವೆ. ಆಸ್ಪತ್ರೆಯ ಸುತ್ತಲೂ ಕಟ್ಟೆಚ್ಚರ ವಹಿಸಲಾಗಿದ್ದು, ಕೇವಲ ಗಾಯಾಳುಗಳನ್ನು ಮಾತ್ರವೇ ಒಳಗೆ ಬಿಡಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ.
ಮೃತರ ಸಂಬಂಧಿಕರು ಶವ ಗುರುತಿಸಿ, ಅಗತ್ಯವಾದ ದಾಖಲೆಗಳಿಗೆ ಸಹಿಹಾಕಿದ ಬಳಿಕ ಶವಪರೀಕ್ಷೆ ಮಾಡಲಾಗುತ್ತದೆ. ಬಳಿಕ ಅಧಿಕೃತವಾಗಿ ವೈದ್ಯರು ಸಾವಿನ ಪ್ರಕರಣ ತಿಳಿಸಿತ್ತಾರೆ.