ನವದೆಹಲಿ, ಫೆ.25 (DaijiworldNews/PY) : ಎರಡು ದಿನಗಳ ಪ್ರವಾಸ ನಿಮಿತ್ತ ಫೆ.24 ಸೋಮವಾರದಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಆಗಮಿಸಿದ್ದರು. ಅಹಮದಾಬಾದ್ನ ಮೊಟೆರಾ ಕ್ರೀಡಾಂಗಣದಲ್ಲಿ ನಡೆದಿದ್ದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಭಾತರ-ಅಮೆರಿಕ ಮಧ್ಯೆ ಮಹತ್ವ ರಕ್ಷಣಾ ಒಪ್ಪಂದದ ಬಗ್ಗೆ ಘೋಷಣೆ ಮಾಡಿದ್ದು, ಇಂದು ಈ ಒಪ್ಪಂದಕ್ಕೆ ಟ್ರಂಪ್ ಹಾಗೂ ಮೋದಿ ಸಹಿ ಮಾಡುವ ಸಾಧ್ಯತೆ ಹೆಚ್ಚಾಗಿದೆ.
ಹೈದರಾಬಾದ್ ಹೌಸ್ನಲ್ಲಿ ಬೆಳಗ್ಗೆ 11 ಗಂಟೆಗೆ ಪ್ರಧಾನಿ ಮೋದಿ ಹಾಗೂ ಟ್ರಂಪ್ ಮಾತುಕತೆ ನಡೆಸಲಿದ್ದು, ಈ ಸಭೆಯಲ್ಲಿ ಹಲವಾರು ನಿಯೋಗಗಳು ಪಾಲ್ಗೊಳ್ಳಲಿವೆ. ಈ ಸಂದರ್ಭ ಭಾರತ-ಅಮೆರಿಕ 3 ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಮೊಟೆರಾ ಕ್ರೀಡಾಂಗಣದಲ್ಲಿ ಮಾತನಾಡಿದ್ದ ಡೊನಾಲ್ಡ್ ಟ್ರಂಪ್ ಅವರು, 3 ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದವನ್ನು ಭಾರತದೊಂದಿಗೆ ಮಾಡಿಕೊಳ್ಳುತ್ತೇವೆ. ಈ ಒಪ್ಪಂದದ ಪ್ರಕಾರ, ಯುದ್ಧ ವಿಮಾನ, ಸಬ್ಮೆರಿನ್ ಸೇರಿದಂತೆ ನಮ್ಮ ದೇಶದಲ್ಲಿ ಯಾವುದೇ ಅತ್ಯಾಧುನಿಕ ರಕ್ಷಣಾ ಸಾಮಗ್ರಿಗಳನ್ನು ಸಿದ್ಧಪಡಿಸಿದರೂ ನಾವು ಅದನ್ನು ಭಾರತಕ್ಕೆ ಕೊಡುತ್ತೇವೆ. ಈ ಮುಖಾಂತರ ಭಾರತ ಏಷ್ಯಾದಲ್ಲಿ ಪ್ರಬಲ ಮಿಲಿಟರಿ ವ್ಯವಸ್ಥೆಯನ್ನು ಹೊಂದುವ ದೇಶವಾಗಲಿದೆ ಎಂದು ಹೇಳಿದ್ದರು.
ಈ ಒಪ್ಪಂದಕ್ಕೆ ಸಹಿ ಬಿದ್ದರೆ ಭಾರತ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಬಲಗೊಳ್ಳಲಿದ್ದು, ಚೀನಾ ಮತ್ತು ಪಾಕಿಸ್ತಾನವನ್ನು ಸುಲಭವಾಗಿ ಮಣಿಸುವ ಸಾಮರ್ಥ್ಯ ಭಾರತಕ್ಕೆ ಬರಲಿದೆ.