ನವದೆಹಲಿ, ಫೆ.25 (DaijiworldNews/PY) : ದೆಹಲಿ ಸರ್ಕಾರವು ಈಶಾನ್ಯ ದೆಹಲಿಯಲ್ಲಿ ಶಾಂತಿ ಮರುಸ್ಥಾಪನೆಗಾಗಿ ಹಲವಾರು ಕ್ರಮಗಳನ್ನು ಪ್ರಕಟಿಸಿದೆ. ಈ ಬಗ್ಗೆ ಮಂಗಳವಾರ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅಗತ್ಯವಾದ ಸೂಚನೆಗಳನ್ನು ನೀಡಿದರು.
ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಪೊಲೀಸರಿಗೆ ಮೇಲಿನವರ ಆಜ್ಞೆಯನ್ನು ಮಾತ್ರ ಪಾಲಿಸುವಂತೆ ಸೂಚಿಸಲಾಗಿದೆ. ಅವರಿಗೆ ಸೂಕ್ತವಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರವಿಲ್ಲ. ಎಂದರು.
ದೆಹಲಿಗೆ ಇತರ ರಾಜ್ಯಗಳಿಂದ ಅಧಿಕ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಇದರಿಂದಾಗಿ ಹಿಂಸಾಚಾರ ಇನ್ನಷ್ಟು ಅಧಿಕವಾಗಬಹುದು. ಹಾಗಾಗಿ ದೆಹಲಿಯ ಗಡಿಗಳನ್ನು ಮುಚ್ಚಲಾಗುವುದು. ಮುಂಜಾಗ್ರತಾ ಕ್ರಮವಾಗಿ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಬಂಧಿಸಲಾಗುವುದು ಎಂದು ತಿಳಿಸಿದರು.
ಶಾಂತಿಪಾಲನೆಗಾಗಿ ದೇಗುಲಗಳು ಹಾಗೂ ಮಸೀದಿಗಳ ಮೈಕ್ಗಳಿಂದ ಸಂದೇಶ ಬಿತ್ತರಿಸಲಾಗುವುದು. ಶಾಂತಿ ಕಾಪಾಡುವ ಸಲುವಾಗಿ ಹಿಂಸಾಚಾರ ಪೀಡಿತ ಬೀದಿಗಳಲ್ಲಿ ಸ್ಥಳೀಯ ಶಾಸಕರು ಹಾಗು ಪೊಲೀಸರು ಸಂಚರಿಸಿ ಜನರಲ್ಲಿ ಮನವಿ ಮಾಡಲಿದ್ದಾರೆ. ಅಗ್ನಿಶಾಮಕ ವಾಹನಗಳನ್ನು ಬೆಂಕಿ ಅನಾಹುತ ಸಂಭವಿಸಿದ ಕಡೆಗೆ ತುರ್ತಾಗಿ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.