ನವದೆಹಲಿ, ಫೆ.25 (DaijiworldNews/PY) : ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಪ್ರತ್ಯೇಕವಾಗಿ ಗಲ್ಲುಶಿಕ್ಷೆಗೆ ಗುರಿಪಡಿಸಲು ನಿರ್ದೇಶನ ನೀಡುವಂತೆ ಕೇಂದ್ರ ಗೃಹ ಸಚಿವಾಲಯ ಸಲ್ಲಿಸಿದ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್ ಮಾರ್ಚ್.05ಕ್ಕೆ ಮುಂದೂಡಿದೆ.
ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಆರ್.ಬಾನುಮತಿ ನೇತೃತ್ವದ ನ್ಯಾ.ಅಶೋಕ್ ಭೂಷಣ್, ನ್ಯಾ.ನವೀನ್ ಸಿನ್ಹಾರನ್ನೊಳಗೊಂಡ ತ್ರಿಸದಸ್ಯ ಪೀಠವು ಅರ್ಜಿ ವಿಚಾರಣೆ ನಡೆಸಿತು. ಈಗಾಗಲೇ ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್ ನಾಲ್ವರು ಅಪರಾಧಿಗಳಿಗೆ ಮಾರ್ಚ್.03ರಂದು ಗಲ್ಲುಶಿಕ್ಷೆ ವಿಧಿಸುವಂತೆ ಡೆತ್ ವಾರಂಟ್ ಹೊರಡಿಸಿತ್ತು.
ಕೇಂದ್ರ ಸರ್ಕಾರವು ಇದೀಗ ಸಲ್ಲಿಸಿದ ಅರ್ಜಿ ವಿಚಾರಣೆಯು ಮಾ.05ಕ್ಕೆ ಮುಂದೂಡಿಕೆಯಾಗಿದ್ದು, ಈ ಅರ್ಜಿ ಇತ್ಯರ್ಥವಾಗುವರೆಗೂ ದೋಷಿಗಳಿಗೆ ಗಲ್ಲುಶಿಕ್ಷೆ ವಿಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.
ಎರಡು ಬಾರಿ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆಗೆ ದಿನಾಂಕವನ್ನು ನಿಗದಿಗೊಳಿಸಲಾಗಿತ್ತು. ಜ.22ರ ಬೆಳಗ್ಗೆ 6 ಗಂಟೆಗೆ ಮೊದಲ ಬಾರಿ ಗಲ್ಲುಶಿಕ್ಷೆ ವಿಧಿಸುವಂತೆ ಪಟಿಯಾಲಾ ಹೌಸ್ ಕೋರ್ಟ್ ಡೆತ್ ವಾರಂಟ್ ಹೊರಡಿಸಿತ್ತು. ದೋಷಿಗಳ ಕ್ಯುರೇಟಿವ್ ಅರ್ಜಿ ಹಾಗೂ ಕ್ಷಮಾದಾನ ಅರ್ಜಿ ಇತ್ಯರ್ಥವಾಗದ ಹಿನ್ನೆಲೆ ಮೊದಲು ನೀಡಿದ ಆದೇಶಕ್ಕೆ ಪಟಿಯಾಲಾ ಹೌಸ್ ಕೋರ್ಟ್ ತಡೆ ನೀಡಿದ್ದು, ಬಳಿಕ ಫೆ.01ರ ಬೆಳಗ್ಗೆ 7 ಗಂಟೆಗೆ ಗಲ್ಲುಶಿಕ್ಷೆ ವಿಧಿಸುವಂತೆ ಆದೇಶಿಸಿತ್ತು. ಎರಡನೇ ಬಾರಿಯೂ ಗಲ್ಲುಶಿಕ್ಷೆಗೆ ತಡೆ ನೀಡಿದ್ದ ದೆಹಲಿ ಹೈಕೋರ್ಟ್, ಸೋಮವಾರ 3ನೇ ಬಾರಿ ನಾಲ್ವರು ಅಪರಾಧಿಗಳ ಗಲ್ಲುಶಿಕ್ಷೆಗೆ ಡೆತ್ ವಾರಂಟ್ ಜಾರಿಗೊಳಿಸಿದೆ.
ನಿರ್ಭಯಾ ಅತ್ಯಾಚಾರ ಮತ್ತು ಹಾಗೂ ಹತ್ಯೆ ಪ್ರಕರಣದ ಅಪರಾಧಿಗಳಾದ ಮುಕೇಶ್ ಸಿಂಗ್ (32), ಪವನ್ ಗುಪ್ತಾ (25), ವಿನಯ್ ಕುಮಾರ್ ಶರ್ಮಾ (26), ಅಕ್ಷಯ್ ಕುಮಾರ್ ಸಿಂಗ್ (31)ನನ್ನು ದೆಹಲಿಯ ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ.