ಬಳ್ಳಾರಿ, ಫೆ.25 (DaijiworldNews/PY) : "ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಶ್ನಾತೀತ ನಾಯಕ. ಅವರ ಮಗ ವಿಜಯೇಂದ್ರ ಸೂಪರ್ ಸಿಎಂ ಅಲ್ಲ" ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಎಸ್ವೈ ಅವರು ಹೋರಾಟಗಾರರು, ಅವರ ಅಂತ್ಯವೂ ಹೋರಾಟದಲ್ಲಿ ಕೊನೆಗೊಳ್ಳಬೇಕು. ಅವರ ಉತ್ತಾರಾಧಿಕಾರದ ವಿಚಾರವಾಗಿ ಯಾವುದೇ ಊಹಾಪೋಹಗಳಿಲ್ಲ. ಅವರೇ ಮುಖ್ಯಮಂತ್ರಿಯಾಗಿರುತ್ತಾರೆ" ಎಂದರು.
"ಸಿಎಂ ಬಿಎಸ್ವೈ ಅವರು ಪ್ರಶ್ನಾತೀತ ನಾಯಕ. ಆದರೆ ಅವರ ಮಗ ವಿಜಯೇಂದ್ರ ಸೂಪರ್ ಸಿಎಂ ಅಲ್ಲ. ಸಿಎಂ ಅವರಿಗೆ 78 ಆಗಿರಬಹುದು. ಹಾಗೆಂದು ವಿಜಯೇಂದ್ರ ಉತ್ತರಾಧಿಕಾರಿಯಲ್ಲ. 7 ಜನ ಸಿಎಂಗಳೊಂದಿಗೆ 42 ವರ್ಷ ಕೆಲಸ ಮಾಡಿದ್ದೇನೆ. ಒಬ್ಬರನ್ನು ಸಿಎಂ ಮಾಡಲು ಏನು ಮಾಡಲಾಗಿದೆ ಎಲ್ಲವೂ ತಿಳಿದಿದೆ, ಅನುಭವವೂ ಇದೆ" ಎಂದು ತಿಳಿಸಿದರು.
"ನನಗೆ ವಸತಿ ಖಾತೆ ನೀಡಿರುವ ಕುರಿತು ಸ್ವಲ್ಪ ಅಳುಕಿದೆ. ಆದರೆ, ಸೋಮಣ್ಣ ಬಂದರೆ ಮನೆ ಕೊಡುತ್ತಾರೆ, ಖಾತೆಯಿಂದ ಜನ ನಂಬುತ್ತಾರೆ. ಎಂದಾದರೂ ಇಬ್ರಾಹಿಂ ನಿಜ ಹೇಳಿದ್ದಾರಾ, ನಾವೆಲ್ಲಾ ಜೊತೆಗಿದ್ದವರು. ಅವರು ನೆಸೆಪುಡಿ ಹಾಕುತ್ತಾರೆ ಅಷ್ಟೆ" ಎಂದರು.
ಈ ಸಂದರ್ಭ ಸಂಸದ ದೇವೇಂದ್ರಪ್ಪ, ವಸತಿ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮ್ ಪ್ರಸಾದ್ ಮನೋಹರ್, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಶಾಸಕ ಜಿ.ಸೋಮಶೇಖರ ರೆಡ್ಡಿ ಇದ್ದರು.