ನವದೆಹಲಿ, ಫೆ.25 (DaijiworldNews/PY) : ಎಟಿಎಂಗಳಲ್ಲಿ 2000ರೂ. ಮುಖಬೆಲೆಯ ನೋಟುಗಳನ್ನು ಪಡೆಯುವ ಗ್ರಾಹಕರು, ಚಿಲ್ಲರೆ ಪಡೆಯಲು ಪರದಾಡುವುದನ್ನು ಗಮನಿಸಿದ ಇಂಡಿಯನ್ ಬ್ಯಾಂಕ್ ಮಾ.1 ರಿಂದ ಎಟಿಎಂಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳನ್ನು ತುಂಬದೇ ಇರಲು ನಿರ್ಧರಿಸಿದೆ.
ಗ್ರಾಹಕರು ಎಟಿಎಂಗಳಲ್ಲಿ ಹಣ ಹಿಂತೆಗೆದ ನಂತರ ಅದಕ್ಕೆ ಚಿಲ್ಲರೆ ಮಾಡಿಸಲು ಪರದಾಡುತ್ತಿದ್ದು, ಅಂಗಡಿಗಳು ಹಾಗೂ ಇನ್ನಿತರ ಕಡೆ ಚಿಲ್ಲರೆ ಸಿಗದ ಕಾರಣ ಬ್ಯಾಂಕುಗಳಿಗೆ ಹೋಗುತ್ತಿದ್ಧಾರೆ. ಹೀಗಾಗಿ ನೋಟು ವಿತರಣೆಯ ಉದ್ದೇಶ ಹಾಳಾಗುತ್ತಿದೆ. ಎಟಿಎಂಗಳಲ್ಲಿ ಮಾ.1 ರಿಂದ 2000 ರೂಪಾಯಿ ನೋಟಿನ ಬದಲು 200 ರೂಪಾಯಿ ನೋಟುಗಳನ್ನು ಹೆಚ್ಚು ವಿತರಣೆ ಮಾಡಲಾಗುತ್ತದೆ. ಅದಾಗಿಯೂ ಎಟಿಎಂಗಳಲ್ಲಿ 2000 ರೂ. ಮುಖಬೆಲೆಯ ನೋಟುಗಳು ಉಳಿದಿದ್ದರೆ, ಮಾ.1ರ ನಂತರ ಅವುಗಳನ್ನು ಬ್ಯಾಂಕು ಪುನಃ ಪಡೆಯುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವಿಚಾರವಾಗಿ ಇಂಡಿಯನ್ ಬ್ಯಾಂಕ್ನ ಡಿಜಿಟಲ್ ಬ್ಯಾಂಕ್ ವಿಭಾಗ ಫೆ.17ರಂದು ಸುತ್ತೋಲೆ ಕೂಡ ಹೊರಡಿಸಿದೆ. ಶಾಖೆಗಳ ಮೂಲಕ ಆ ನೋಟನ್ನು ನೀಡಲಾಗುತ್ತದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.