ಬೆಂಗಳೂರು, ಫೆ 25 (DaijiworldNews/SM): ಇನ್ನೇನು ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗಳು ಹತ್ತಿರವಾಗುತ್ತಿವೆ. ಆದರೆ, ಪರೀಕ್ಷೆ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ನಕಲು ಮಾಡುವ ಮೂಲಕ ಪರೀಕ್ಷೆಗಳನ್ನು ಬರೆಯುತ್ತಾರೆ. ಆದರೆ, ಇದಕ್ಕೆ ಬ್ರೇಕ್ ಹಾಕಲು ಶಿಕ್ಷಣ ಇಲಾಖೆ ಮುಂದಾಗಿದೆ.
ವಾರ್ಷಿಕ ಪರೀಕ್ಷೆಯಲ್ಲಿ ಹಲವು ರೀತಿಯ ಅಕ್ರಮಗಳು ನಡೆಯುತ್ತವೆ. ಪ್ರಶ್ನಾ ಪಾತ್ರಿಕೆ ಸೋರಿಕೆ, ಮೊಬೈಲ್, ಡಿಜಿಟಲ್ ಕೈ ಗಡಿಯಾರ ಬಳಕೆ, ನಕಲು ಮಾಡಲು ಸಹಾಯ ಹೀಗೆ ಕೆಲವು ವಿದ್ಯಾರ್ಥಿಗಳು ವರ್ಷಂಪ್ರತಿ ಹೊಸ ಹೊಸ ಮಾರ್ಗಗಳ ಮೂಲಕ ಅಕ್ರಮವನ್ನು ಎಸಗುತ್ತಾರೆ. ಆದರೆ, ಇವುಗಳಿಗೆ ತಕ್ಕ ಶಿಕ್ಷೆ ಇದ್ದರು, ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ. ಪರಿಣಾಮವಾಗಿ ಪರೀಕ್ಷೆಗಳಿಗೆ ಶ್ರಮಪಟ್ಟು ಸಿದ್ದಗೊಂಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿವೆ. ಹಲವು ಸಂದರ್ಭಗಳಲ್ಲಿ ಪ್ರಶ್ನಾ ಪತ್ರಿಕೆ ಸೋರಿಕೆಯಂತಹ ಸಂದರ್ಭದಲ್ಲಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತದೆ. ಇದು ಪ್ರಾಮಾಣಿಕರಿಗೆ ಮಾಡುವ ದ್ರೋಹದ ಜೊತೆಗೆ ಕೆಲವು ವಿದ್ಯಾರ್ಥಿಗಳಿಗೆ ಆಘಾತಕ್ಕೂ ಕಾರಣವಾಗುತ್ತದೆ. ಪರೀಕ್ಷಾ ಅಕ್ರಮ ತಡೆಗಟ್ಟಬೇಕೆಂದು ಎಷ್ಟೇ ಅಗ್ರಹ, ಒತ್ತಡಗಳು ಇದ್ದರೂ ಕೂಡ ಆದರೆ, ಈ ಶೈಕ್ಷಣಿಕ ವರ್ಷದಲ್ಲಿ ಇಲಾಖೆ ಅಲರ್ಟ್ ಆಗಿದೆ.
ಪರೀಕ್ಷಾ ಅಕ್ರಮಗಳನ್ನು ನಿಯಂತ್ರಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಪರೀಕ್ಷಾ ಅಕ್ರಮ ನಡೆಸುವವರಿಗೆ ಕಠಿಣ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ. ಯಾವುದೇ ರೀತಿಯ ಅಕ್ರಮ ಎಸಗಿದ್ದಲ್ಲಿ ಐದು ವರ್ಷ ಶಿಕ್ಷೆ ಹಾಗೂ ಐದು ಲಕ್ಷ ರೂಪಾಯಿ ದಂಡ ವಿಧಿಸಲು ನಿರ್ಧರಿಸಲಾಗಿದೆ. ಅಥವಾ ಎರಡನ್ನೂ ಕೂಡ ವಿಧಿಸುವ ಸಾಧ್ಯತೆ ಕೂಡ ಇದೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಎಚ್ಚರವಹಿಸಬೇಕಾದ ಅನಿವಾರ್ಯತೆ ಇದೆ. ಇನ್ನು ಪರೀಕ್ಷಾ ನಕಲು, ನಕಲು ಮಾಡಲು ಸಹಾಯ, ಬದಲಿ ವ್ಯಕ್ತಿಯಾಗಿ ಉತ್ತರಿಸುವುದು, ಪ್ರಶ್ನಾ ಪತ್ರಿಕೆ ಸೋರಿಕೆ, ಬದಲಿ ವ್ಯಕ್ತಿಯಾಗಿ ಉತ್ತರಿಸುವುದು, ಮೊಬೈಲ್ ಬಳಕೆ ಸೇರಿದಂತೆ ಹಲವು ಅಕ್ರಮಗಳಿಗೆ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಇಲಾಖೆ ನಿರ್ಧರಿಸಿದೆ.
ಪ್ರತಿಯೊಂದು ಹೊಸ ಕಾಯಿದೆ ನಿಯಮಗಳನ್ನು ಸರಕಾರ ಜಾರಿಗೆ ತರುತ್ತದೆ. ಆದರೆ, ಎಷ್ಟರ ಮಟ್ಟಿಗೆ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತದೆ ಎನ್ನುವುದು ಮುಖ್ಯವಾಗಿದೆ. ಅಕ್ರಮ ಎಸಗಿದವರಿಗೆ ಯಾವುದೇ ಮುಲಾಜಿಲ್ಲದೆ ಶಿಕ್ಷೆ ವಿಧಿಸುವ ಅಗತ್ಯತೆ ಇದೆ. ಸರಕಾರ ಬದಲಾದಂತೆ ಅವರೊಂದಿಗೆ ನೀತಿ ನಿಯಮಗಳು ತೆರಳದೆ, ಪರೀಕ್ಷಾ ಅಕ್ರಮ ತಡೆಗೆ ಕಠಿಣ ನೀತಿ ಜಾರಿಗೊಳಿಸಬೇಕಾದ ಅನಿವಾರ್ಯತೆ ಇದೆ.