ನವದೆಹಲಿ, ಫೆ 26 (Daijiworld News/MB) : ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಗಳು ಹಾಗೂ ಬೆಂಬಲಿಗರ ನಡುವೆ ನಡೆದ ಘರ್ಷಣೆಯಿಂದ ಸೋಮವಾರ ಭುಗಿಲೆದ್ದ ಹಿಂಸಾಚಾರ ಮಂಗಳವಾರ ಕೂಡ ಮುಂದುವರಿದಿದ್ದು, ದಿಲ್ಲಿ ಪೊಲೀಸ್ನ ಹೆಡ್ ಕಾನ್ಸ್ಟೆಬಲ್ ಸಹಿತ ಕನಿಷ್ಠ 13ಮಂದಿ ಸಾವನ್ನಪ್ಪಿದ್ದಾರೆ ಹಾಗೂ 150ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಈಶಾನ್ಯ ದೆಹಲಿಯ ಭಜನ್ಪುರ, ಚಾಂದ್ಬಾಗ್ ಹಾಗೂ ಕಾರವಲ್ ನಗರಗಳಲ್ಲಿ ಸಿಎಎ ಪರ ಬೆಂಬಲಿಗರು ಹಿಂಸಾಚಾರ ನಡೆಸಿದ್ದು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ ಹಚ್ಚಿದ್ದಾರೆ.
ಈ ನಡುವೆ ಕೇಂದ್ರ ಸಚವಾಲಯವು ರಾಜಧಾನಿಯಲ್ಲಿ ಹಿಂಸೆಯನ್ನು ತಡೆಯಲು ಸೇನೆಗೆ ಕರೆ ನೀಡುವ ಪ್ರಸ್ತಾಪವನ್ನು ತಿರಸ್ಕಾರ ಮಾಡಿದ್ದು ಗಲಭೆ ನಿಯಂತ್ರಿಸಲು ಈಗಾಗಲೇ ಸಾಕಷ್ಟು ಕೇಂದ್ರಿಯ ಪಡೆಗಳು ಹಾಗಊ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದೆ. ಹಿಂಸಾಚಾರ ನಡೆಯುತ್ತಿರುವ ಪ್ರದೇಶಗಳಲ್ಲಿ ೬೦೦೦ ಪೊಲೀಸರು ಹಾಗೂ ಅರೆಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ.
ಚಾಂದ್ಬಾಗ್ನಲ್ಲಿ ಮಂಗಳವಾರ ಹಿಂಸಾಚಾರವನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸೆಲ್ಗಳನ್ನು ಸಿಡಿಸಿದ್ದಾರೆ. ಭಜನ್ಪುರದಲ್ಲಿ ಸಿಎಎ ಪರ ಹಾಗೂ ವಿರೋಧಿ ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಪರಸ್ಪರ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ದೊಣ್ಣೆ ಹಿಡಿದುಕೊಂಡ ಗಲಭೆಕೋರರು ಗೋಕುಲಪುರಿಯಲ್ಲಿರುವ ಟಯರ್ ಮಾರುಕಟ್ಟೆಗೆ ಬೆಂಕಿ ಹಚ್ಚಿದ್ದಾರೆ. ಹಾಗೆಯೇ ಕಟ್ಟಡಗಳ ಒಳಗೆ ನುಗ್ಗಿ ದಾಂಧಳೆ ನಡೆಸಿದ್ದಾರೆ.
ಇನ್ನು ಕೇಂದ್ರ ಗೃಹ ಸಚಿವಾಲಯವು ಯಾವುದೇ ಪ್ರಚೋದನಕಾರಿ ಹೇಳಿಕೆ ನೀಡದಂತೆ ವಿನಂತಿಸಿದ್ದು ಸಮಾಜ ವಿರೋಧಿಗಳು ಈ ಘಟನೆಗಳನ್ನು ದುರುಪಯೋಗ ಮಾಡದಂತೆ ಉತ್ತರಪ್ರದೇಶ ಹಾಗೂ ಹರಿಯಾಣದ ದೆಹಲಿ ಗಡಿಯಲ್ಲಿ ನಿಗಾ ವಹಿಸುವಂತೆ ಸೂಚನೆ ನೀಡಲಾಗಿದೆ.
ಈ ಘಟನೆಗಳ ಕುರಿತಾಗಿ ತಮ್ಮ ಹೇಳಿಕೆ ನೀಡುರುವ ದೆಹಲಿ ಪೊಲೀಸ್ ಎಂ.ಎಸ್. ರಾಂಧವ ಅವರು, "ಸಾಕಷ್ಟು ಭದ್ರತಾ ಪಡೆ ನಮ್ಮಲಿದೆ. ಪ್ರಸ್ತುತ ಸ್ಥಿತಿಗಳನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆ" ಎಂದು ತಿಳಿಸಿದ್ದಾರೆ.
ಹಾಗೆಯೇ ದೆಹಲಿ ಪೊಲೀಸ್ ವರಿಷ್ಠಾಧಿಕಾರಿ ಅಮೂಲ್ಯಾ ಪಟ್ನಾಯಕ್, "ನಮಗೆ ಗೃಹಸಚಿವಾಲಯವು ನಿರಂತರ ಬೆಂಬಲ ನೀಡುತ್ತಿದೆ. ಸಾಕಷ್ಟು ಭದ್ರತಾ ಪಡೆ ನಮ್ಮಲ್ಲಿದೆ. ಭದ್ರತಾ ಪಡೆ ಕೊರತೆ ಇದೆ ಎಂಬುದನ್ನು ನಾವು ಒಪ್ಪುವುದಿಲ್ಲ" ಎಂದು ಹೇಳಿದ್ದಾರೆ.
ಜಾಫರ್ಬಾದ್, ಗೋಕುಲ್ಪುರಿ, ಜೋಹ್ರಿ ಎಂಕ್ಲೇವ್, ಶಿವವಿಹಾರ್ ಹಾಗೂ ವೌಜ್ಪುರ- ಬಾಬರ್ಪುರ ನಿಲ್ದಾಣಗಳಲ್ಲಿ ಸಂಚರಿಸುವ ದೆಹಲಿ ಮೆಟ್ರೊ ಸಂಚಾರವನ್ನು ಸ್ಥಗಿತ ಮಾಡಲಾಗಿದೆ. ಗುಂಪು ಸೇರುವುದನ್ನು ತಡೆಯಲು ಸೆಕ್ಷನ್ 144 ಹೇರಲಾಗಿದೆ.