ವಿಜಯಪುರ, ಫೆ 26 (Daijiworld News/MB) : ಗಾಂಧೀಜಿ ಅವರ ಒಡನಾಡಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಅವರು "ನಕಲಿ ಸ್ವಾತಂತ್ರ್ಯ ಹೋರಾಟಗಾರ, ಆತ ಪಾಕಿಸ್ತಾನದ ಏಜೆಂಟ್" ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಟೀಕಿಸಿದ್ದು ಇದೀಗ ತೀವ್ರ ಖಂಡನೆ ವ್ಯಕ್ತವಾಗಿದೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ, "ಅಟಲ್ ಬಿಹಾರಿ ವಾಜಪೇಯಿ ಕೂಡಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದಾರೆ. ಆದರೆ, ಅವರ ತತ್ವ, ಸಿದ್ಧಾಂತಗಳು ಬೇರೆಯಾಗಿದ್ದವು. ದೊರೆಸ್ವಾಮಿ ನಕಲಿ ಹೋರಾಟಗಾರ" ಎಂದು ಹೇಳಿದ್ದಾರೆ.
ಹಾಗೆಯೇ, "ನಮಗೆ ಪಾಕಿಸ್ತಾನ ಬಚ್ಚಾ, ಅದರ ತಂದೆ ನಾವೇ. ಪಾಕಿಸ್ತಾನ ಹುಟ್ಟಿದ್ದೇ ನಮ್ಮಿಂದ. ಪಾಕಿಸ್ತಾನ ಜವಾಹರಲಾಲ್ ನೆಹರೂ ಅವರ ಸ್ವಾರ್ಥದಿಂದ ಹುಟ್ಟಿದೆ" ಎಂದಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ, "ಮುಖ್ಯಮಂತ್ರಿ ಯಡಿಯೂರಪ್ಪ ಅವರು ದೊರೆಸ್ವಾಮಿ ವಿರುದ್ಧ ಅತ್ಯಂತ ಕೀಳಾಗಿ ಮಾತನಾಡಿರುವ ಯತ್ನಾಳ ವಿರುದ್ಧ ಕ್ರಮತೆಗೆದುಕೊಂಡು ಅವರ ಬಾಯಿ ಮುಚ್ಚಿಸಬೇಕು. ಇಲ್ಲಿದಿದ್ದಲ್ಲಿ ಅದು ಸರ್ಕಾರದ ಅಭಿಪ್ರಾಯ ಎಂದು ಒಪ್ಪಿಕೊಳ್ಳಲಿ" ಎಂದು ಹೇಳಿದ್ದಾರೆ.
ಒಬ್ಬರಾದ ಮೇಲೆ ಒಬ್ಬರಂತೆ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರ ನಾಲಿಗೆಗೆ ತಕ್ಷಣ ಕಡಿವಾಣ ಹಾಕದಿದ್ದರೆ ಅನಾಹುತ ಕಾದಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಕುರಿತಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, "ನಾಡಿನ ಸಾಕ್ಷಿಪ್ರಜ್ಞೆಯಾಗಿರುವ ದೊರೆಸ್ವಾಮಿಯವರ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸಿ ಯತ್ನಾಳ ಆಗಸಕ್ಕೆ ಉಗಿದು ತಮ್ಮ ಮುಖಕ್ಕೆ ಸಿಡಿಸಿಕೊಂಡಿರುವುದು ಚೋದ್ಯ" ಎಂದು ಹೇಳಿದ್ದಾರೆ.