ಉತ್ತರ ಪ್ರದೇಶ, ಫೆ 26 (Daijiworld News/MB) : ಉತ್ತರಪ್ರದೇಶದಲ್ಲಿ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಸಭೆಯಲ್ಲಿ ಅಯೋಧ್ಯೆಯಲ್ಲಿ ನೀಡಲಾದ ಭೂಮಿಯನ್ನು ಸ್ವೀಕಾರ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು ಅಲ್ಲಿ ಮಸೀದಿ, ಇಂಡೋ-ಇಸ್ಲಾಮಿಕ್ ಸಂಶೋಧನಾ ಕೇಂದ್ರ ಹಾಗೆಯೇ ಆಸ್ಪತ್ರೆ ಹಾಗೂ ಗ್ರಂಥಾಲಯವನ್ನು ನಿರ್ಮಿಸುವುದಾಗಿ ಉತ್ತರ ಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಮಂಡಳಿ ಸೋಮವಾರ ತಿಳಿಸಿದೆ.
ಯುಪಿ ಸರ್ಕಾರ ನಮಗೆ ನೀಡಿರುವ ಐದು ಎಕರೆ ಭೂಮಿಯನ್ನು ತೆಗೆದುಕೊಳ್ಳಲು ಮಂಡಳಿಯ ಸಭೆಯಲ್ಲಿ ನಿರ್ಧರಿಸಲಾಗಿದೆ. ಮಸೀದಿ ನಿರ್ಮಾಣಕ್ಕಾಗಿ ಮಂಡಳಿ ಶೀಘ್ರದಲ್ಲೇ ಟ್ರಸ್ಟ್ ಸ್ಥಾಪಿಸಲಿದೆ ಎಂದು ಮಂಡಳಿಯ ಅಧ್ಯಕ್ಷ ಜುಫರ್ ಫಾರೂಕಿ ಸುದ್ದಿಗಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಮುಂದೆ ಕಟ್ಟಲಾಗುವ ಮಸೀದಿಗೆ ಈಗ ನೆಲಸಮ ಮಾಡಲ್ಪಟ್ಟಿರುವ ಬಾಬರಿ ಮಸೀದಿ ಹೆಸರಿಡಬಹುದೇ ಎಂದು ಸುದ್ದಿಗಾರರು ಪ್ರಶ್ನಿಸಿದ್ದು, "ಈ ನಿಟ್ಟಿನಲ್ಲಿ ಟ್ರಸ್ಟ್ ನಿರ್ಧಾರ ತೆಗೆದುಕೊಳ್ಳುತ್ತದೆ. ಮಂಡಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ" ಎಂದು ಹೇಳಿದರು.
ಹಾಗೆಯೇ "ಈ ಐದು ಎಕರೆ ಭೂಮಿಯಲ್ಲಿ ಮಸೀದಿಯಲ್ಲದೇ ಇಂಡೋ-ಇಸ್ಲಾಮಿಕ್ ಸಂಶೋಧನಾ ಕೇಂದ್ರ, ಸಾರ್ವಜನಿಕ ಗ್ರಂಥಾಲಯ, ದತ್ತಿ ಆಸ್ಪತ್ರೆ ಮತ್ತು ಭೂಮಿಯಲ್ಲಿ ಇತರ ಉಪಯುಕ್ತ ಸೌಲಭ್ಯಗಳು ಕಲ್ಪಿಸಲಾಗುತ್ತದೆ" ಎಂದು ತಿಳಿಸಿದ್ದಾರೆ.
"ಸ್ಥಳೀಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಮಸೀದಿಯ ಗಾತ್ರವನ್ನು ನಿರ್ಧರಿಸಲಾಗುವುದು. ಐದು ಎಕರೆ ಭೂಮಿಯನ್ನು ತಿರಸ್ಕಾರ ಮಾಡುವುದು ನ್ಯಾಯಾಲಯದ ತೀರ್ಪು ಉಲ್ಲಂಘನೆ ಮಾಡಿದಂತೆ" ಎಂದು ಹೇಳಿದ್ದಾರೆ.
ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಕುರಿತು ನವೆಂಬರ್ನಲ್ಲಿ ನಡೆದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ರಾಮ ಮಂದಿರ ನಿರ್ಮಾಣದ ಪರವಾಗಿ ತೀರ್ಪು ನೀಡಿತ್ತು. ಅಯೋಧ್ಯೆಯೊಳಗಿದ್ದ ಮಸೀದಿಗೆ ಪರ್ಯಾಯವಾಗಿ ಐದು ಎಕರೆ ಜಾಗವನ್ನು ನೀಡಬೇಕು ಎಂದು ಸೂಚಿಸಿತ್ತು.
1992 ರಲ್ಲಿ ಅಯೋಧ್ಯೆಯಲ್ಲಿದ್ದ 16 ನೇ ಶತಮಾನದ ಬಾಬರಿ ಮಸೀದಿಯನ್ನು ಕಾರ್ ಸೇವಕರು ಧ್ವಂಸ ಮಾಡಲಾಗಿದ್ದು ಮೂಲತಃ ಅದೇ ಸ್ಥಳದಲ್ಲಿ ರಾಮ ಮಂದಿರವಿದೆ ಎಂದು ವಾದಿಸಿದ್ದರು.
ಅಯೋಧ್ಯೆಯಲ್ಲಿ ನೀಡಲಾದ ಐದು ಎಕರೆ ಭೂಮಿಯಲ್ಲಿ ಮಸೀದಿ ಬದಲಾಗಿ ಆಸ್ಪತ್ರೆಯಂತಹ ಅಗತ್ಯ ಸೌಲ್ಯಭ್ಯಗಳನ್ನು ನಿರ್ಮಿಸಬೇಕು ಎಂದು ಹಲವು ಮಂದಿ ಬೇಡಿಕೆ ಮುಂದಿಟ್ಟಿದ್ದರು.
ಫಾರೂಕಿ ಸೇರಿದಂತೆ ಸುನ್ನಿ ವಕ್ಫ್ ಮಂಡಳಿಯಲ್ಲಿ ಎಂಟು ಸದಸ್ಯರು ಇದ್ದು ಈ ಪೈಕಿ ಆರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.