ನವದೆಹಲಿ, ಫೆ 26 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರುದ್ಧ ಪ್ರತಿಭಟನೆಯು ಈಗ ಕೋಮು ಹಿಂಸಾಚಾರಕ್ಕೆ ತಿರುಗಿದ್ದು ಈ ಹಿಂಸಾಚಾರದಿಂದಾಗಿ ಮತ್ತೆ ಐವರು ಸಾವನ್ನಪ್ಪಿದ್ದು ಮೃತರ ಸಂಖ್ಯೆ 20 ಕ್ಕೆ ಏರಿಕೆಯಾಗಿದೆ.
ಬುಧವಾರ ಮುಂಜಾನೆ ಗುರು ತೇಜ್ ಬಹದ್ದೂರ್ ಆಸ್ಪತ್ರೆಯು ಮಾಧ್ಯಮಗಳಿಗೆ ಈ ಕುರಿತಾಗಿ ಮಾಹಿತಿ ನೀಡಿದ್ದು ಹಿಂಸಾಚಾರದಲ್ಲಿ ಗಾಯಗೊಂಡಿದ್ದ ಐವರು ಮೃತಪಟ್ಟಿದ್ದಾರೆ. ಹಿಂಸಾಚಾರದಲ್ಲಿ ಸುಮಾರು 150ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಈ ನಡುವೆ ಮಂಗಳವಾರದಿಂದಲೂ ಪೊಲೀಸರು ಈಶಾನ್ಯ ದೆಹಲಿಯಿಂದ ಗಾಜಿಯಾಬಾದ್ಗೆ ತೆರಳುವ ಎಲ್ಲಾ ರಸ್ತೆಗಳಿಗೂ ಬ್ಯಾರಿಕೇಡ್ಗಳನ್ನು ಹಾಕಿ ಬಂದ್ ಮಾಡಿದ್ದಾರೆ.
"ದೆಹಲಿಯಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ನಾವು ಗಡಿಗಳನ್ನು ಮುಚ್ಚಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ. ಸಮೀಪದ ಪ್ರದೇಶಗಳಲ್ಲಿ ಈಗಾಗಲೇ ಮದ್ಯದ ಅಂಗಡಿಗಳನ್ನು ಮುಚ್ಚಿದ್ದೇವೆ" ಎಂದು ಜಿಲ್ಲಾಧಿಕಾರಿ ಅಜಯ್ ಕುಮಾರ್ ಪಾಂಡೆ ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಿಂಸಾಚಾರದಲ್ಲಿ ಗಾಯಗೊಂಡ ಶಹದಾರಾ ಡಿಸಿಪಿ (ಪೊಲೀಸ್ ಉಪ ಆಯುಕ್ತ) ಅಮಿತ್ ಶರ್ಮಾ ಅವರ ಕುಟುಂಬದೊಂದಿಗೆ ಮಾತನಾಡಿದ್ದಾರೆ ಮತ್ತು ಅವರ ಆರೋಗ್ಯದ ಕುರಿತು ವಿಚಾರಿಸಿದ್ದಾರೆ.