ನವದೆಹಲಿ, ಫೆ 26 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆಯ (ಸಿಎಎ) ಪರ ವಿರುದ್ಧದ ಪ್ರತಿಭಟನೆಯಲ್ಲಿ ಈಶಾನ್ಯ ದೆಹಲಿಯಲ್ಲಿ ಉಂಟಾಗಿರುವ ಹಿಂಸಾಚಾರ ಸಂಬಂಧ ದೆಹಲಿ ಪೊಲೀಸರಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಲು, ಸಂತ್ರಸ್ತರಿಗೆ ಪರಿಹಾರ ನೀಡಲು ಹಾಗೂ ಪ್ರಚೋದನಾಕಾರಿ ಭಾಷಣ ಮಾಡಿದ ಹಲವಾರು ರಾಜಕೀಯ ನಾಯಕರನ್ನು ಬಂಧಿಸುವುದರ ಕುರಿತಾಗಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ದೆಹಲಿ ಪೊಲೀಸ್ ಕಮಿಷನರ್ಗೆ ನೊಟೀಸ್ ಜಾರಿ ಮಾಡಿದೆ.
ನ್ಯಾಯಾಲಯವು ಸಿಎಎ ಕುರಿತಾಗಿ ಭುಗಿಲೆದ್ದ ಈಶಾನ್ಯ ದೆಹಲಿಯ ಹಿಂಸಾಚಾರ ಕುರಿತಂತೆ ಮಧ್ಯಾಹ್ನ 12.30ರೊಳಗಾಗಿ ಪ್ರತಿಕ್ರಿಯಿಸಬೇಕು ಎಂದು ಹೇಳಿದ್ದು ಕೋರ್ಟ್ ಆದೇಶಕ್ಕೆ ಪೊಲೀಸರು ಕಾಯುವ ಅಗತ್ಯವಿಲ್ಲ. ಬದಲಿಗೆ ಹಿಂಸಾಚಾರ ತಡೆಗಟ್ಟಲು ಸ್ವಯಂಪ್ರೇರಿತರಾಗಿ ಅಗತ್ಯ ಕ್ರಮ ಕೈಗೊಳ್ಳಿ ಎಂದು ನಿರ್ದೇಶಿಸಿದೆ.
ಸೋಮವಾರ ಸಿಎಎ ಪರ ಮತ್ತು ವಿರೋಧದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ್ದು ಇದುವರೆಗೂ 20 ಜನರು ಮೃತಪಟ್ಟಿದ್ದು, 189 ಜನರು ಗಾಯಗೊಂಡಿದ್ದಾರೆ.