ಕೊಪ್ಪಳ, ಫೆ 26 (Daijiworld News/MB) : "ಈ ಬಾರಿಯ ಬಜೆಟ್ ಸಂದರ್ಭದಲ್ಲಿ ಸಂವಿಧಾನವನ್ನು ಅನುವಾದಿಸಿ ಕನ್ನಡದಲ್ಲಿ ಮುದ್ರಿಸಿ ಎಲ್ಲಾ ಶಾಸಕರಿಗೂ ಓದಿ, ಮಾತನಾಡಲು ಅವಕಾಶ ನೀಡಲಾಗುತ್ತದೆ" ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಹೇಳಿದರು.
ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮಾರ್ಚ್ 5 ರಂದು ಬಜೆಟ್ ಮಂಡನೆ ಮಾಡಲು ಎಲ್ಲಾ ತಯಾರಿ ನಡೆದಿದೆ. ಐತಿಹಾಸಿಕ ಬಜೆಟ್ ಅಧಿವೇಶನವಾಗಲಿದೆ ಈ ಬಾರಿಯ ಬಜೆಟ್. ಯಾಕೆಂದರೆ ಎಲ್ಲಾ ಶಾಸಕರು ಬಜೆಟ್ ಅಧಿವೇಶನದಲ್ಲಿ ಸಂವಿಧಾನದ ಕುರಿತಾಗಿ ಮಾತನಾಡಲಿದ್ದಾರೆ. ಆ ಹಿನ್ನಲೆಯಲ್ಲಿ ಅವರಿಗೆ ಸಂವಿಧಾನವನ್ನು ಕನ್ನಡಕ್ಕೆ ಅನುವಾದಿಸಿ ಮುದ್ರಿಸಿ ಎಲ್ಲರಿಗೂ ಪುಸ್ತಕ ನೀಡುತ್ತೇವೆ. ಸಂವಿಧಾನದ ಪುಸ್ತಕ ಓದಿಕೊಂಡು ಬಂದು ಮಾತನಾಡಲು ಶಾಸಕರಿಗೆ ಅವಕಾಶ ನೀಡಲಾಗುತ್ತದೆ" ಎಂದು ತಿಳಿಸಿದ್ದಾರೆ.
ಹಾಗೆಯೇ ಕೊಪ್ಪಳ ಜಿಲ್ಲೆಯ ತುಂಗಭದ್ರಾ ಡ್ಯಾಂನಲ್ಲಿ ಹೂಳು ತುಂಬಿದ ವಿಚಾರದ ಕುರಿತಾಗಿ ಮಾತನಾಡಿ, "ನವಲಿ ಬಳಿ ಜಲಾಶಯ ನಿರ್ಮಾಣದ ಚಿಂತನೆ ನಡೆಸಲಾಗುವುದು. ಹೊಸ ಡ್ಯಾಂ ನಿರ್ಮಾಣಕ್ಕೆ 6 ಸಾವಿರ ಕೋಟಿಗೂ ಅಧಿಕ ಹಣ ವ್ಯಯವಾಗಲಿದೆ. ಇದೊಂದು ಅಂತರ್ರಾಜ್ಯ ವಿಷಯವಾಗಿದ್ದು ಅದರ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ" ಎಂದರು.