ನವದೆಹಲಿ, ಫೆ.26 (DaijiworldNews/PY) : ದೆಹಲಿಯಲ್ಲಿ ಸಿಎಎ ಸಂಬಂಧಿತ ಪ್ರತಿಭಟನೆಗಳು ಕೋಮು ಸಂಘರ್ಷಕ್ಕೆ ತಿರುಗಿದ್ದು, 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಾಗಾಗಿ ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ದೇಶ-ವಿರೋಧಿ ವರ್ತನೆಗಳನ್ನು ಉತ್ತೇಜಿಸುವ ಯಾವುದೇ ದೃಶ್ಯಗಳನ್ನು ಪ್ರಸಾರ ಮಾಡುವ ವಿಚಾರವಾಗಿ ಎಲ್ಲಾ ಖಾಸಗಿ ಟಿವಿ ಹಾಗೂ ಚಾನೆಲ್ಗಳಿಗೆ ಕೇಂದ್ರ ಮಾಹಿತಿ ಹಾಗೂ ಪ್ರಸಾರ ಸಚಿವಾಲಯ ಸಲಹೆ ನೀಡಿದೆ.
ಸಿಎಎಗೆ ಸಂಬಂಧಿಸಿದ ಹಿಂಸಾಚಾರದಲ್ಲಿ ಬುಧವಾರ ಬೆಳಿಗ್ಗೆ ಮೃತಪಟ್ಟವರ ಸಂಖ್ಯೆ 20ಕ್ಕೇರಿದ್ದು, 190ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಅಂಗಡಿಗಳಿಗೆ, ಮನೆ, ವಾಹನಗಳಗೆ ಬೆಂಕಿ ಹಚ್ಚಲಾಗಿದ್ದು, ಅಪಾರ ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ.
ದೇಶವಿರೋಧಿ ವರ್ತನೆಗಳನ್ನು ಉತ್ತೇಜಿಸಬಲ್ಲ, ಹಿಂಸಾಚಾರವನ್ನು ಪ್ರಚೋದಿಸಬಲ್ಲ, ಭಾವನೆಗಳನ್ನು ಕೆರಳಿಸಬಲ್ಲ ಅಥವಾ ಕಾನೂನು ಮತ್ತು ಸುವ್ಯವಸ್ಥೆ ಸ್ಥಾಪನೆಗೆ ಅಡ್ಡಿಯಾಗಬಲ್ಲ ಚಿತ್ರ, ವಿಡಿಯೊ ಮುಂತಾದ ಯಾವುದೇ ವಸ್ತುವಿಷಯಗಳ ಪ್ರಸಾರದ ಸಂದರ್ಭ ಎಚ್ಚರಿಕೆ ವಹಿಸುವಂತೆ ಎಲ್ಲಾ ಟಿವಿ ಚಾನೆಲ್ಗಳಿಗೆ ಈ ಮೂಲಕ ಸಲಹೆ ನೀಡಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
ಧಾರ್ಮಿಕ ಗುಂಪು, ಪಂಗಡಗಳನ್ನು ನಿಂದಿಸುವಂತಹ ಅಥವಾ ಕೋಮು ಉದ್ವಿಗ್ನತೆಯನ್ನು ಉತ್ತೇಜಿಸಬಲ್ಲ, ಧಾರ್ಮಿಕ ಅಥವಾ ಸಮುದಾಯಗಳ ಮೇಲಿನ ದಾಳಿಗೆ ಸಂಬಂಧಿಸಿದ ವಿಷಯಗಳು ಅಥವಾ ಧಾರ್ಮಿಕ ಗುಂಪು, ಪಂಗಡಗಳನ್ನು ನಿಂದಿಸುವಂತಹ ಯಾವುದೇ ವಿಷಯಗಳನ್ನು ಪ್ರಸಾರ ಮಾಡುವ ವೇಳೆ ಎಚ್ಚರವಹಿಸುವಂತೆ ಖಾಸಗಿ ಚಾನೆಲ್ಗಳಿಗೂ ಮಾಹಿತಿ ನೀಡಲಾಗಿದೆ.
ಉದ್ದೇಶಪೂರ್ವಕ, ಸುಳ್ಳು, ವ್ಯಂಗ್ಯವಾದ, ಮಾನಹಾನಿಕಾರಕ, ಹಾಗೂ ಅರ್ಧ ಸತ್ಯಗಳನ್ನು ಬಿಂಬಿಸುವಂತ ವಿಷಯಗಳನ್ನು ಪ್ರದರ್ಶಿಸದಂತೆಯೂ ಎಚ್ಚರಿಕೆ ನೀಡಿದ್ದಾರೆ.
1995ರ ಕೇಬಲ್ ಟೆಲಿವಿಷನ್ ನೆಟ್ವರ್ಕ್ ಕಾಯ್ದೆ ಅಡಿಯಲ್ಲಿ ವಿವರಿಸಲಾದ ಕಾರ್ಯಕ್ರಮ ಹಾಗೂ ಜಾಹೀರಾತು ಸಂಹಿತೆಗಳ ಉಲ್ಲಂಘನೆಯಾಗುವ ಯಾವುದೇ ವಿಷಯಗಳನ್ನು ಪ್ರದರ್ಶಿಸದಂತೆ ಗಮನ ವಹಿಸಬೇಕೆಂದು ಖಾಸಗಿ ವಾಹಿನಿಗಳಿಗೆ ತಿಳಿಸಲಾಗಿದೆ.