ನವದೆಹಲಿ, ಫೆ 26 (Daijiworld News/MB) : ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಅಂತರರಾಷ್ಟ್ರೀಯ ಕಾನೂನು ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಹೊಗಳಿರುವುದನ್ನು ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ಪ್ರಶ್ನಿಸಿದೆ.
ನ್ಯಾಯಮೂರ್ತಿ ಮಿಶ್ರಾ ಅವರು ಸಮಾರಂಭದಲ್ಲಿ "ಬಹುಮುಖ ಪ್ರತಿಭೆ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಜಾಗತಿಕವಾಗಿ ಚಿಂತಿಸುತ್ತಾರೆ ಹಾಗೂ ಸ್ಥಳೀಯವಾಗಿ ಸ್ಪಂದಿಸುತ್ತಾರೆ (Thinks globally and acts locally)" ಎಂದು ಹೇಳಿದ್ದರು
ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ ನ್ಯಾಯಮೂರ್ತಿ ಮಿಶ್ರಾ ಅವರು ಕಾರ್ಯಕ್ರಮದ ವಂದನಾರ್ಪಣೆಯಲ್ಲಿ ಪ್ರಧಾನಿಯವರನ್ನು ಅತಿಯಾಗಿ ಹೊಗಳಿದ್ದಾರೆ ಎಂದು ಹೇಳಿದೆ.
ಆಡಳಿತ ನಡೆಸುವವರ ವಿರುದ್ಧವಾಗಿ ದೂರು ಬಂದ ಸಂದರ್ಭದಲ್ಲಿ ಸಂವಿಧಾನ ಮತ್ತು ಕಾನೂನನ್ನು ಮಾನದಂಡವಾಗಿರಿಸಿಕೊಂಡು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳು ಕ್ರಮ ತೆಗೆದುಕೊಳ್ಳಬೇಕು. ಈ ರೀತಿ ಹೇಳಿಕೆ ನೀಡುವುದರಿಂದ ನ್ಯಾಯಾಂಗ ನಿಷ್ಪಕ್ಷಪಾತವಾಗಿ ಮತ್ತು ಸ್ವತಂತ್ರವಾಗಿ ಕಾರ್ಯ ಮಾಡುತ್ತಿದೆ ಎಂಬ ಜನರ ನಂಬಿಕೆ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳು ಆಡಳಿತಾಂಗ ಹಾಗೂ ಶಾಸಕಾಂಗದ ನಡುವೆ ಗೌರವಯುತ ಅಂತರವನ್ನು ಕಾಯ್ದುಕೊಳ್ಳಬೇಕಾದದ್ದು ಕರ್ತವ್ಯ. ಜನಸಾಮಾನ್ಯರು ನ್ಯಾಯಾಲಯದಿಂದ ನ್ಯಾಯ ಹಾಗೂ ಪಾರದರ್ಶಕತೆಯನ್ನು ನಿರೀಕ್ಷಿಸುತ್ತಾರೆ ಎಂದು ಬಾರ್ ಅಸೋಸಿಯೇಷನ್ ಹೇಳಿದೆ.
ಸ್ವಾತಂತ್ರ್ಯ ನ್ಯಾಯಾಂಗ ವ್ಯವಸ್ಥೆ ಬಲಪಡಿಸಲು ನಿರಂತರವಾಗಿ ಎಚ್ಚರವಾಗಿರಬೇಕು ಎಂದು ತಿಳಿಸಿದೆ.