ನವದೆಹಲಿ, ಫೆ.26 (DaijiworldNews/PY) : "ದೆಹಲಿಯ ಹಿಂಸಾಚಾರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ವಿಫಲರಾದ ಹಿನ್ನೆಲೆ ನೈತಿಕ ಹೊಣೆ ಹೊತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ಕೊಡಬೇಕು" ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸೋನಿಯಾ ಗಾಂಧಿ ಅವರು, "ಕೇಂದ್ರ ಸರ್ಕಾರವು ದೆಹಲಿಯ ಹಿಂಸಾಚಾರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ವಿಫಲವಾಗಿದೆ. ಗುಪ್ತಚರ ಇಲಾಖೆಯ ಮಾಹಿತಿ ಇದ್ದರೂ ಗೃಹ ಇಲಾಖೆ ಏಕೆ ಕ್ರಮಗಳನ್ನು ತೆಗೆದುಕೊಂಡಿಲ್ಲ" ಎಂದು ಕೇಳಿದ್ಧಾರೆ.
ದೆಹಲಿ ಸರ್ಕಾರ ಕೂಡಾ ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ವಿಫಲವಾಗಿದೆ. ಹೆಚ್ಚಿನ ಭದ್ರತೆಯನ್ನು ಗಲಭೆ ಪೀಡಿತ ಪ್ರದೇಶಗಳಲ್ಲಿ ಕೈಗೊಳ್ಳುವಂತೆ ತಿಳಿಸಿದರು.
ಗಲಭೆಯಲ್ಲಿ ಮೃತಪಟ್ಟವರ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದ ಸೋನಿಯಾ ಗಾಂಧಿ, "ಕೇಂದ್ರ ಗೃಹ ಸಚಿವರು ಇಷ್ಟೆಲ್ಲಾ ನಡೆಯುತ್ತಿದ್ದರೂ ಎಲ್ಲಿದ್ದರು. ಹೆಚ್ಚಿನ ಪೊಲೀಸರನ್ನು ಗಲಭೆ ಪೀಡಿತ ಪ್ರದೇಶಗಳಲ್ಲಿ ನಿಯೋಜನೆ ಮಾಡಬೇಕು". ಶಾಂತಿ ಸಮಿತಿಯನ್ನು ಗ್ರಾಮಗಳಲ್ಲಿ ರಚನೆ ಮಾಡುವಂತೆ ತಿಳಿಸಿದರು.
ಗುರುವಾರ ದೆಹಲಿ ಹಿಂಸಾಚಾರವನ್ನು ಖಂಡಿಸಿ ಹಾಗೂ ಕೇಂದ್ರ ಸರ್ಕಾರ ಗಲಭೆ ನಿಯಂತ್ರಣ ಮಾಡಲು ವಿಫಲವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ರಾಷ್ಟ್ರಪತಿ ಭವನದವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಿದೆ. ಪಾದಯಾತ್ರೆಯು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆಯಲಿದ್ದು ಘಟನೆಯ ವಿಚಾರವಾಗಿ ರಾಷ್ಟ್ರಪತಿಗೆ ಕಾಂಗ್ರೆಸ್ ಮನವಿ ಸಲ್ಲಿಸಲಿದೆ.
ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರೋಧಿ ಪ್ರತಿಭಟನಾಕಾರರ ನಡುವೆ ಭುಗಿಲೆದ್ದ ಘರ್ಷಣೆ ಹಿಂಸಾಚಾರದ ಸ್ವರೂಪವನ್ನು ಪಡೆದುಕೊಂಡಿದ್ದು ಇದುವರೆಗೂ 20 ಜನರು ಸಾವನ್ನಪ್ಪಿದ್ದಾರೆ. 150ಕ್ಕೂ ಅಧಿಕ ಮಂದಿ ಗಲಭೆಯಲ್ಲಿ ಗಾಯಗೊಂಡಿದ್ದಾರೆ.
ಈಶಾನ್ಯ ದೆಹಲಿಯ ಚಾಂದ್ ಬಾಗ್, ಬಾಬರ್ ಪುರ್, ಜೋರಿ ಪುರ್ಗಳಲ್ಲಿ ಗಲಭೆ ಸಂಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಹೆಚ್ಚುವರಿ ಅರೆಸೇನಾ ಪಡೆಗಳನ್ನು ಹಿಂಸಾಚಾರ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ನಿಯೋಜನೆ ಮಾಡಲಾಗಿದೆ.