ಬೀದರ್, ಫೆ.26 (DaijiworldNews/PY) : "ಸ್ವಾತಂತ್ರ್ಯ ಯೋಧ ಎಚ್.ಎಸ್. ದೊರೆಸ್ವಾಮಿ ಅವರನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ನಕಲಿ ಯೋಧ ಹಾಗೂ ಪಾಕ್ ಏಜೆಂಟ್ ಎಂದು ಹುಚ್ಚುಚ್ಚಾದ ಹೇಳಿಕೆಗಳನ್ನು ನೀಡುವ ಮುಖಾಂತರ ದೇಶದ ಸ್ವಾತಂತ್ರ್ಯ ಯೋಧರನ್ನು ಅವಮಾನಿಸಿದ್ದಾರೆ. ಅವರು ನೀಡಿದ ಹೇಳಿಕೆ ದೇಶದ್ರೋಹದ ಹೇಳಿಕೆಯಾಗಿದೆ" ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, "ಏಕವಚನದಲ್ಲಿ ವೃದ್ದರಿಗೆ ಹೀಯಾಳಿಸುವುದು ಲಜ್ಜೆಗೇಡಿತನದ ಧ್ಯೋತಕವಾಗಿದೆ. ಯತ್ನಾಳ ಅವರಂತಹ ಜನರು ಮನುಷ್ಯ ಜಾತಿಗೆ ಸೇರಿದವರಲ್ಲ. ಬಿಜೆಪಿ ಸಂಸ್ಕಾರವನ್ನು ಬಿಂಬಿಸಿದ್ಧಾರೆ. ಅವರನ್ನು ಬಿಜೆಪಿ ವರಿಷ್ಠರು ಪಕ್ಷದಿಂದ ಉಚ್ಚಾಟಿಸಬೇಕು. ರಾಷ್ಟ್ರಬ ಬಗ್ಗೆ ಗೌರವವಿದ್ದರೆ ವಿಧಾನಸಭೆಯ ಸದಸ್ಯತ್ವ ರದ್ದುಪಡಿಸಬೇಕು" ಎಂದು ತಿಳಿಸಿದರು.
"ಬಿಜೆಪಿಯ ಹಿರಿಯ ಮುಖಂಡ ಎಲ್.ಕೆ. ಅಡ್ವಾನಿ ಅವರು ಪಾಕಿಸ್ತಾನದ ಮಹಮ್ಮದ್ ಅಲಿ ಜಿನ್ನಾ ಅವರನ್ನು ಪ್ರಶಂಸಿಸಿ ಹೇಳಿಕೆ ಕೊಟ್ಟಿದಕ್ಕೆ ಪ್ರತಿಕ್ರಿಯಿಸಿದ ಅವರು, ಅಡ್ವಾಣಿ ಅವರು ಪಾಕಿಸ್ತಾನದ ಏಜೆಂಟರಾಗಿದ್ದರೇ ಎನ್ನುವುದಕ್ಕೆ ಬಿಜೆಪಿ ಉತ್ತರಿಸಬೇಕು" ಎಂದರು.
"ದೇಶದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದು ಭಯದ ವಾತಾವರಣ ನಿರ್ಮಿಸಲಾಗಿದೆ. ಅನೇಕ ಜನ ಅಮಾಯಕರ ಸಾವಿಗೆ ಬಿಜೆಪಿ ಮುಖಂಡರು ಕಾರಣರಾಗಿದ್ದಾರೆ. ದ ಎಹಲಿ ನಡೆಯುತ್ತಿರುವ ಹಿಂಸಾಚಾರ ಧರ್ಮಾದಾರಿತವಾಗಿದೆ. ಹುಚ್ಚುತನದ ಹೇಳಿಕೆಗಳನ್ನು ನೀಡಿ ಬೆಂಕಿ ಹಚ್ಚುವ ಕಾರ್ಯಗಳನ್ನು ಮಾಡುತ್ತಿದ್ದಾರೆ. ರಾಜ್ಯದ ವ್ಯಾಪ್ತಿಗೆ ಕಾನೂನು ಸುವ್ಯವಸ್ಥೆ ಬರುತ್ತದೆ ಎಂದು ಪದೇ ಪದೇ ಬಿಜೆಪಿಯವರು ಹೇಳುತ್ತಿದ್ದಾರೆ. ದೆಹಲಿ, ಕೇಂದ್ರ ಅಧೀನದಲ್ಲಿದ್ದರೂ 20 ಜನ ಅಮಾಯಕರು ಸಾವನ್ನಪ್ಪಿದ್ದಾರೆ" ಎಂದು ಹೇಳಿದರು.
"ರಾಜ್ಯ ಸರ್ಕಾರ ಇತ್ತೀಚೆಗೆ ಹಾಲಿನ ದರ ಹೆಚ್ಚಿಸಿದ ಬೆನ್ನಲ್ಲೇ, ಮತ್ತೆ ರಸ್ತೆ ಸಾರಿಗೆ ಸಂಸ್ಥೆಯ ಬಸ್ಗಳ ಪ್ರಯಾಣದರ ಹೆಚ್ಚಳ ಮಾಡಿದೆ. ಸರ್ಕಾರ ದರ ಹೆಚ್ಚಳದ ಆದೇಶ ಹಿಂದಕ್ಕೆ ಪಡೆಯಬೇಕು. ರಾಜ್ಯದ ಜನ ಅತಿವೃಷ್ಟಿ, ಬರಗಾಲದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. 2 ಕೋಟಿ ಜನರಿಗೆ ಪರಿಹಾರ ಕೊಡುವುದೇ ಆಗಿಲ್ಲ. ಪರಿಹಾರ ನಡಲು ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ" ಎಂದರು.
"ಸಿಎಂ ಬಿಎಸ್ವೈ ಅವರು ಪಶು ಮೇಳದಲ್ಲಿ ರೈತರಿಂದ 20 ಕ್ವಿಂಟಾಲ್ ತೊಗರಿ ಖರೀದಿ ಮಾಡುವುದಾಗಿ ಘೋಷಣೆ ಮಾಡಿದ್ದರು. ಸರ್ಕಾರದ ಆದೇಶ 18 ದಿನ ಕಳೆದರೂ ಬಂದಿಲ್ಲ. ಕೇಂದ್ರದತ್ತ ಬೊಟ್ಟು ಮಾಡುವುದಿದ್ದರೆ ಬೀದರ್ನಲ್ಲಿ ಘೋಷಣೆ ಮಾಡುವ ಅಗತ್ಯವೇನಿತ್ತು. ಅಭಿವೃದ್ದಿ ಕೈಗೊಳ್ಳಬೇಕು, ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಸಾಲದು" ಎಂದು ತಿಳಿಸಿದರು.