ನವದೆಹಲಿ, ಫೆ.26 (DaijiworldNews/PY) : ಈಶಾನ್ಯ ದೆಹಲಿಯಲ್ಲಿ ಪೌರತ್ವದ ಕಿಚ್ಚು ಹೊತ್ತಿ ಉರಿಯುತ್ತಿದ್ದು, ಈಗಾಗಲೇ ಹಿಂಸಾಚಾರದಲ್ಲಿ 20 ಮಂದಿ ಸಾವನ್ನಪ್ಪಿದ್ಧಾರೆ. ಈ ನಡುವೆ ಚಾಂದ್ ಬಾಗ್ ಪ್ರದೇಶದ ಚರಂಡಿಯೊಂದರಲ್ಲಿ ಗುಪ್ತಚರ ಇಲಾಖೆಯ ಸಿಬ್ಬಂದಿಯೊಬ್ಬರ ಶವ ಪತ್ತೆಯಾಗಿದೆ.
ಸಾವನ್ನಪ್ಪಿದ ಅಧಿಕಾರಿಯನ್ನು ಅಂಕಿತ್ ಶರ್ಮಾ (26) ಎಂದು ಗುರುತಿಸಲಾಗಿದೆ. ಅಂಕಿತ್ ಶರ್ಮಾ ಅವರು ಕರ್ತವ್ಯ ಮುಗಿಸಿ ಮನೆಗೆ ವಾಪಾಸಾಗುತ್ತಿದ್ದ ಸಂದರ್ಭ ಅವರ ಮೇಲೆ ಗುಂಪೊಂದು ದಾಳಿ ನಡೆಸಿದೆ. ಈ ಸಂದರ್ಭ ಗುಂಡಿಕ್ಕಿ ಹತ್ಯೆಗೈದು ಚರಂಡಿಗೆ ಎಸೆದಿದ್ದಾರೆ ಎಂದು ಅಂದಾಜಿಸಲಾಗಿದೆ.
ಅಂಕಿತ್ ಶರ್ಮಾ ಅವರ ಶವವನ್ನು ಬುಧವಾರ ಮೇಲಕ್ಕೆತ್ತಲಾಗಿದೆ. ಗುಪ್ತಚರ ಮಂಡಳಿಯಲ್ಲಿ ತರಬೇತಿಗೆ ನಿಯುಕ್ತರಾಗಿ ಯುವ ಅಧಿಖಾರಿ ಅಂಕಿತ್ ಶರ್ಮಾ ಅವರ ದೇಹದಲ್ಲಿ ಗುಂಡೇಟಿನ ಗಾಯವಿದೆ, ಮರಣೋತ್ತರ ಪರೀಕ್ಷೆಗಾಗಿ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅವರು 2017ರಲ್ಲಿ ಕರ್ತವ್ಯಕ್ಕೆ ಸೇರಿದ್ದರು.
ಅಂಕಿತ್ ಶರ್ಮಾ ಅವರ ಮನೆ ಖಜೂರಿನ ಖಾಸ್ ಪ್ರದೇಶದಲ್ಲಿದ್ದು, ಫೆ.25 ಮಂಗಳವಾರ ಸಂಜೆಯಿಂದ ನಾಪ್ತತೆಯಾಗಿದ್ದರು ಎಂದು ಅವರ ಕುಟುಂವದವರು ತಿಳಿಸಿದರು. ಅವರ ಶವ ಬುಧವಾರ ಮಧ್ಯಾಹ್ನ ದೊರೆತಿದೆ. ತಮ್ಮ ಮನೆಯಿರುವ ಬೀದಿಗೆ ಜನರ ಗುಂಪೊಂದು ಧಾವಿಸಿ ಕಲ್ಲು ತೂರಾಟ ನಡೆಸಲು ಆರಂಭಿಸಿದ್ದರು. ಅಂಕಿತ್ಗೆ ಮನೆಯವರು ಪೋನ್ ಕರೆ ಮಾಡಿ ತಕ್ಷಣವೇ ರಕ್ಷಣೆಗೆ ಬರುವಂತೆ ಹೇಳಿದ್ದರು. ಅಂಕಿತ್ ಶರ್ಮಾ ಅವರು ಮನೆ ಸಮೀಪ ಬಂದಾಗ ಆ ಗುಂಪು ಅವರನ್ನು ತಡೆದು ನಿಲ್ಲಿಸಿತು. ಆ ಗುಂಪು ಅಂಕಿತ್ ಅವರಿಗೆ ಥಳಿಸಿದ್ದು ಬಳಿಕ ಎಳೆದೊಯ್ದಿತು ಎಂಬುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕಲ್ಲೇಟಿಗೆ ಬಲಿಯಾದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ರತನ್ ಲಾಲ್ ಅವರ ಶವ ಬುಧವಾರ ಪತ್ತೆಯಾದ ಬಳಿಕ ಅವರನ್ನು ಗುರುತಿಸುವಂತೆ ಕುಟುಂಬಿಕರಿಗೆ ತಿಳಿಸಲಾಯಿತು. ಅಂಕಿತ್ ಅವರ ತಂದೆ ದೇವೇಂದ್ರ ಶರ್ಮಾ ಕೂಡಾ ಐಬಿಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದಾರೆ.
ಅಂಕಿತ್ಗೆ ಚೆನ್ನಾಗಿ ಥಳಿಸಿ ಬಳಿಕ ಗುಂಡು ಹಾರಿಸಲಾಯಿತು ಎಂದು ಅವರ ತಂದೆ ದೇವೇಂದ್ರ ಶರ್ಮಾ ತಿಳಿಸಿದ್ಧಾರೆ.