ಬೆಳಗಾವಿ, ಫೆ.26 (DaijiworldNews/PY) : "ದೆಹಲಿಯಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಯ ಹಿಂದೆ ಕಾಂಗ್ರೆಸ್ ಷಡ್ಯಂತ್ರ ಸೃಷ್ಟಿಸಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೆಹಲಿಗೆ ಅಮೇರಿಕಾ ಅಧ್ಯಕ್ಷ ಟ್ರಂಪ್ ಬರುವ ಸಮಯ ತಿಳಿದು ಕಾಂಗ್ರೆಸ್ ಷಡ್ಯಂತ್ರ ರೂಪಸಿ ಗಲಭೆಯನ್ನು ಸೃಷ್ಟಿಸಿದೆ" ಎಂದರು.
"ಕಳೆದ ಮೂರು ತಿಂಗಳಿಂದ ಈ ಪ್ರತಿಭಟನೆ ಶಾಂತಿಯುತವಾಗಿ ನಡೆಯುತಿತ್ತು. ಆದರೆ, ಈ ಎರಡು ದಿನದಲ್ಲಿ ಪ್ರತಿಭಟನೆ ಯಾಕೆ ಹಿಂಸಾ ರೂಪಕ್ಕೆ ತಿರುಗಿತು, ಪ್ರತಿಭಟನಾಕಾರರ ಕೈಯಲ್ಲಿ ಪಿಸ್ತೂಲ್ ಎಲ್ಲಿಂದ ಬಂತು ಇವೆಲ್ಲದರ ಹಿಂದೆ ಕಾಂಗ್ರೆಸ್ ಮಾಸ್ಟರ್ ಮೈಂಡ್" ಇದೆ ಎಂದು ಹೇಳಿದರು.
"ಅಧಿಕಾರ ಇಲ್ಲದಿದ್ದಾಗ ಈ ದೇಶದಲ್ಲಿ ಕಾಂಗ್ರೆಸ್ ಗಲಭೆ ಸೃಷ್ಟಿಸೋದನ್ನನೋಡಿದ್ದೇವೆ. ಅರಾಜಕತೆ, ಮೋದಿ ಹೆಸರಿಗೆ ಕಳಂಕ ತರಲು ಅಶಾಂತಿ ನಿರ್ಮಾಣ ಮಾಡಲು ಕಾಂಗ್ರೆಸ್ ಉಪಾಯ ನಡೆಸಿದೆ. ಶೇಕಡಾ 4ರಷ್ಟು ಮತ ಪಡೆಯಲು ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ವಿಫಲವಾಗಿದ್ದು ಬೌದ್ಧಿಕ ದಿವಾಳಿಯಾಗಿದೆ. ಕಾಂಗ್ರೆಸ್ ಈಗ ಓಟ್ ಬ್ಯಾಂಕ್ ಹಿಂದೆ ಬಿದ್ದು ಚಿಲ್ಲರೆ ರಾಜಕಾರಣ ಮಾಡುತ್ತಿದೆ, ಕಾಂಗ್ರೆಸ್ ಇನ್ನೂ ವಂಶಾಡಳಿತದಿಂದ ಹೊರಬಂದಿಲ್ಲ. ಕಾಂಗ್ರೆಸ್ ಹಳ್ಳಿ ಹಳ್ಳಿಗಳಲ್ಲಿಯೂ ತನ್ನ ಶಕ್ತಿ ಕಳೆದುಕೊಂಡಿದೆ" ಎಂದು ತಿಳಿಸಿದರು.