ಹಾವೇರಿ, ಫೆ.26 (DaijiworldNews/PY) : "ಮಹಿಳಾ ಮೀನುಗಾರರಿಗೆ ರಾಜ್ಯ ಬಜೆಟ್ನಲ್ಲಿ ದ್ವಿಚಕ್ರ ವಾಹನ ವಿತರಿಸುವ ಯೋಜನೆಯನ್ನು ಅಳವಡಿಸಲು ಚಿಂತನೆ ನಡೆಸಿದ್ದು, ಈ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ" ಎಂದು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಮೀನುಗಾರಿಕೆ ಇಲಾಖೆಯಿಂದ ರಾಜ್ಯದಲ್ಲೆಡೆ ಮತ್ಸದರ್ಶಿನಿ ಯೋಜನೆಯಡಿ ಹೋಟೆಲ್ಗಳನ್ನುತೆರೆಯಲಾಗುವುದು. ಜನತೆಗೆ ಮೀನು ಖಾದ್ಯಗಳ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು" ಎಂದರು.
"ಮೀನು ಸಾಕಾಣಿಕೆ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಕೆರೆ ಹಾಗೂ ಜಲಾಶಯಗಳನ್ನು ಗುತ್ತಿಗೆ ನೀಡುವ ಪದ್ಧತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು. ರಾಜ್ಯದಲ್ಲಿ ಜಲಮೂಲಗಳ ವಿಲೇವಾರಿಗೆ ಹೊಸ ಸೂತ್ರ ಅಳವಡಿಸಿಕೊಳ್ಳಲು ಚಿಂತನೆ ನಡೆದಿದೆ" ಎಂದರು.
"ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿ, ಟೆಂಡರ್ ಕರೆಯಬೇಕೇ ಅಥವಾ ಪಂಚಾಯಿತಿ ಮಟ್ಟದಲ್ಲಿ ಹರಾಜು ಹಾಕಬೇಕೇ ಎಂಬುದನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು" ಎಂದು ತಿಳಿಸಿದರು.
"ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಮುಖಸ್ಥರನ್ನಾಗಿ ಮಾಡಿ, ಎ, ಬಿ ಹಾಗೂ ಸಿ ದರ್ಜೆಯ ಕೆರೆಗಳನ್ನಾಗಿ ವರ್ಗೀಕರಿಸಲಾಗುವುದು. ಇಂತಿಷ್ಟು ಕೆರೆಗಳನ್ನು ಮೀನುಗಾರರ ಸಂಘ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಹಾಗೂ ಆರ್ಥಿಕ ದುರ್ಬಲರಿಗೂ ಮೀಸಲಿರಿಸಿ ಗುತ್ತಿಗೆ ನೀಡಲಾಗುವುದು. ಹಾವೇರಿಯಿಂದಲೇ ಕೆರೆಗಳ ವರ್ಗೀಕರಣ ಕಾರ್ಯವನ್ನು ಆರಂಭಿಸಲಾಗುವುದು. ಈ ಸೂತ್ರವು ಇಲ್ಲಿ ಯಶಸ್ಸಿಯಾದರೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಅಳವಡಿಸಲಾಗುವುದು" ಎಂದು ಹೇಳಿದರು.