ನವದೆಹಲಿ, ಫೆ 26 (DaijiworldNews/SM): ದಿನದಿಂದ ದಿನಕ್ಕೆ ದೆಹಲಿಯ ಗಲಭೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಗಲಭೆಯಲ್ಲಿ ಸುಮಾರು 23 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಕರಣದಲ್ಲಿ ಹೊರಗಿನವರ ಕೈವಾಡವಿದೆ. ದೆಹಲಿಯ ಮುಗ್ದ ಜನತೆ ಇದರಲ್ಲಿ ಭಾಗಿಯಾಗಿಲ್ಲ ಎಂದು ಸಿಎಂ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್, ಹೊರಗಿನಿಂದ ಬಂದ ದುಷ್ಕರ್ಮಿಗಳು ದೆಹಲಿಯಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಸಹಜ ಸ್ಥಿತಿ ಮರಳಲು ಸೇನೆ ನಿಯೋಜಿಸುವ ಅಗತ್ಯ ಇದೆ ಎಂದರು.
ದೆಹಲಿಯಲ್ಲಿ ನೆಲೆಸಿರುವವರು ಶಾಂತಿ ಪ್ರಿಯ ಜನತೆ. ಇಲ್ಲಿನ ಜನತೆಗೆ ಶಾಂತಿಯ ಅಗತ್ಯವಿದೆ. ಎಂದಿಗೂ ಇವರು ಗಲಭೆಗೆ ಮುಂದಾಗುವುದಿಲ್ಲ. ಹಾಗೂ ಗಲಭೆಗೆ ಪ್ರಚೋದನೆ ನೀಡುವುದಿಲ್ಲ. ದೆಹಲಿಯ ಹೊರಗಡೆಯವರು ಮತ್ತು ಕೆಲ ರಾಜಕೀಯ ಪಕ್ಷಗಳೇ ಈ ಗಲಭೆಗೆ ಕಾರಣ ಎಂದು ಆರೋಪಿಸಿದ್ದಾರೆ.
ಇನ್ನು ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಮುಖ್ಯ ಪೊಲೀಸ್ ಪೇದೆ ರತನ್ ಲಾಲ್ ಅವರ ಕುಟುಂಬಕ್ಕೆ ದೆಹಲಿ ಸರ್ಕಾರ 1 ಕೋಟಿ ರೂಪಾಯಿ ಪರಿಹಾರ ನೀಡಲಿದೆ ಎಂದು ಸಿಎಂ ಕೇಜ್ರಿವಾಲ್ ಘೋಷಿಸಿದರು.