ನವದೆಹಲಿ, ಫೆ 26 (DaijiworldNews/SM): ಪ್ರತಿಭಟನೆಯ ಹೆಸರಲ್ಲಿ ಆರಂಭಗೊಂಡ ಸಿಎಎ ವಿರುದ್ಧದ ಹೋರಾಟ ಬಳಿಕ ಹಿಂಸಾಸ್ವರೂಪವನ್ನು ಪಡೆದುಕೊಂಡಿದ್ದು, ದೆಹಲಿಯ ಪ್ರಸ್ತುತ ಪರಿಗತಿಗೆ ಕಾರಣವಾಗಿದೆ. ಇದಕ್ಕೆ ರಾಜಕೀಯ, ಧಾರ್ಮಿಕ, ಕೋಮು ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ, ಹಲವರನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಲಾಗಿದೆ.
ಹಿಂಸಾಚಾರ, ಕೋಮುಗಲಭೆಯಲ್ಲಿ ಈಗಾಗಲೇ ಬಲಿಯಾಗಿರುವವರ ಸಂಖ್ಯೆ 28 ಕ್ಕೆ ಏರಿಕೆಯಾಗಿದೆ. ಗಲಭೆಕೋರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅಲ್ಲದೆ ಸುಮಾರು 18 ಎಫ್ಐಆರ್ ಗಳನ್ನ ದಾಖಲಿಸಲಾಗಿದೆ. ಹಾಗೂ 106 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಈ ನಡುವೆ ಬುಧವಾರದಂದು ಪರಿಸ್ಥಿತಿ ಒಂದು ಹಂತದಲ್ಲಿ ಹತೋಟಿಗೆ ಬಂದಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಿ ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. ಅಹಿತಕರ ಘಟನೆಗಳಿಗೆ ಪ್ರಚೋದನೆ ನೀಡದಂತೆ ಹಾಗೂ ಹಿಂಸಾಚಾರ ನಡೆಸದಂತೆ ಜನನಾಯಕರು, ದೆಹಲಿ ಸಿಎಂ, ಕೇಂದ್ರದ ಸಚಿವರು, ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಪೊಲೀಸ್ ಇಲಾಖೆ ದೆಹಲಿಯ ಜನತೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮತ್ತೊಂದೆಡೆ ಅಹಿತಕರ ಘಟನೆಗಳು ನಡೆದಲ್ಲಿ ಆದೇಶಕ್ಕೆ ಕಾಯಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಪೊಲೀಸರಿಗೆ ತಾಕಿತು ಮಾಡಿದೆ. ತುರ್ತು ಸಂದರ್ಭದಲ್ಲಿ ಆದೇಶವನ್ನು ಕಾದು ಕುಳಿತಲ್ಲಿ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇರುವ ಕಾರಣದಿಂದಾಗಿ ತಕ್ಷಣ ಸ್ಪಂಧಿಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.