ನವದೆಹಲಿ, ಫೆ.27 (DaijiworldNews/PY) : ದೆಹಲಿಯಲ್ಲಿ ಸಿಎಎ ಹಾಗೂ ಎನ್ಆರ್ಸಿ ವಿರೋಧಿಸಿ ನಡೆಸುತ್ತಿದ್ದ ಹೋರಾಟ ಹಿಂಸಾರೂಪಕ್ಕೆ ತಿರುಗಿದ ಪರಿಣಾಮ ಇಲ್ಲಿಯವರೆಗೂ ಸುಮಾರು 190ಕ್ಕೂ ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಇಲ್ಲಿನ ಹಿಂಸಾಚಾರದಲ್ಲಿ ಒಬ್ಬ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ 27 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅನಾಹುತ ಸಂಭವಿಸದಂತೆ ತಡೆಯಲು ಗುರುವಾರವೂ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿದಿದೆ. ಫೆ.26 ಬುಧವಾರದಂದು ನಡೆಯಬೇಕಿದ್ದ 10 ಹಾಗೂ12ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಪರೀಕ್ಷೆಗಳನ್ನು ಮುಂದೂಡಲು ದೆಹಲಿ ಶಿಕ್ಷಣ ಇಲಾಖೆ ಆದೇಶಿಸಿದೆ. ವಿದ್ಯಾರ್ಥಿಗಳ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ವಿಚಾರವಾಗಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿಕೆ ನೀಡಿದ್ದು, ಗಲಭೆ ಪೀಡಿತ ಪ್ರದೇಶದಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿಯಲ್ಲಿ ಸಿಎಎ ಮತ್ತು ಎನ್ಆರ್ಸಿ ವಿರೋಧಿಸಿ ನಡೆಸುತ್ತಿದ್ದ ಹೋರಾಟದಲ್ಲಿ ಹಿಂಸಾಚಾರ ಹೆಚ್ಚುತ್ತಲೇ ಇದ್ದು, ಈ ಬೆನ್ನಲ್ಲೇ ದೆಹಲಿ ಪೊಲೀಸರು ಕಂಡಲ್ಲಿ ಗುಂಡಿಕ್ಕಲು ಆದೇಶ ಹೊರಡಿಸಿದ್ದಾರೆ. ಹಿಂಸಾಚಾರವನ್ನು ತಡೆಗಟ್ಟುವ ಸಲುವಾಗಿ ಕಠಿಣ ಆದೇಶ ಹೊರಡಿಸಿದೆ. ಈ ನಡುವೆ ಸಿಎಎ ವಿಚಾರವಾಗಿ ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಿ ಎಂದು ಸುಪ್ರೀಂಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿದೆ.
ದೆಹಲಿಯ ನಾಲ್ಕು ಭಾಗಗಳಲ್ಲಿ ನಿಷೇಧಾಜ್ಞೆ ಜಾರಿಗೆ ತರಲಾಗಿದ್ದು, ಈ ಸಂದರ್ಭ ಹಿಂಸಾಚಾರ ತಡೆಗಟ್ಟಲು 12 ಪ್ಯಾರಾ ಮಿಲಿಟರಿ ಪಡೆ ನಿಯೋಜನೆ ಮಾಡಲಾಗುತ್ತಿದೆ.
ಈ ನಡುವೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರು. ದೆಹಲಿ ಹಿಂಸಾಚಾರದಲ್ಲಿ ಮೃತಪಟ್ಟ ಮುಖ್ಯ ಪೊಲೀಸ್ ಕಾನ್ಸ್ಟೇಬಲ್ ರತನ್ ಲಾಲ್ ಕುಟುಂಬಕ್ಕೆ ಒಂದು ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಬುಧವಾರ ವಿಧಾನಸಭಾ ಕಲಾಪದಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್ ಅವರು, ಮೃತ ರತನ್ ಲಾಲ್ ಕುಟುಂಬದ ರಕ್ಷಣೆಯ ಜವಾಬ್ದಾರಿ ಸರ್ಕಾರದ್ದು. 1 ಕೋಟಿ ರೂ. ಪರಿಹಾರವನ್ನು ಮೃತರ ಕುಟುಂಬಕ್ಕೆ ನೀಡುತ್ತೇವೆ. ಜೊತೆಗೆ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಲಾಗುವುದು ಎಂದು ತಿಳಿಸಿದ್ದಾರೆ.